More

    ಮಠದಗುಡ್ಡೆ ಭೂಕುಸಿತ ಸಂತ್ರಸ್ತರಿಗಿಲ್ಲ ನೆಲೆ

    ಗುರುಪುರ: ಒಂದೂವರೆ ವರ್ಷದ ಹಿಂದೆ ಗುಡ್ಡ ಕುಸಿತ ಸಂಭವಿಸಿದ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ಪ್ರದೇಶದ 11 ಕುಟುಂಬಗಳ ಜೀವನ ಇನ್ನೂ ಅತಂತ್ರವಾಗಿಯೇ ಇದೆ.
    ಘಟನೆ ಬಳಿಕ ಮನೆ ಕಳೆದುಕೊಂಡ ಮತ್ತು ಮನೆ ತೆರವಾದ 70 ಕುಟುಂಬಗಳಿಗೆ ಸರ್ಕಾರದಿಂದ ತಲಾ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಲಭಿಸಿದೆ. ಎಲ್ಲ ಕುಟುಂಬಗಳಿಗೆ ಮನೆ ಬಾಡಿಗೆ ಹಾಗೂ ನಿವೇಶನ ಗುರುತಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭ ಭರವಸೆ ನೀಡಿದ್ದರು. ಅದಾಗಿ ವರ್ಷವೇ ಕಳೆಯಿತು!

    ಸುರತ್ಕಲ್ ಎನ್‌ಐಟಿಕೆಯ ಭೂ ವಿಜ್ಞಾನ ವಿಭಾಗದ ವಿಶೇಷ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಭೌಗೋಳಿಕ ಹಿನ್ನೆಲೆಯಾಧರಿಸಿ ಅಧ್ಯಯನ ಮಾಡಿದ್ದರು. ಮಠದಗುಡ್ಡೆ ಪ್ರದೇಶ ವಾಸ್ತವ್ಯಕ್ಕೆ ಯೋಗ್ಯವಲ್ಲ ಎಂದಿದ್ದ ತಂಡ ಯೆಲ್ಲೋ, ರೆಡ್ ಜೋನ್ ಎಂದು ವರ್ಗೀಕರಿಸಿ ಎರಡೂ ಪ್ರದೇಶ ವಾಸ್ತವ್ಯಕ್ಕೆ ಯೋಗ್ಯವಲ್ಲ ಎಂದು ವರದಿ ನೀಡಿತ್ತು.
    ನಂತರ ಸಂತ್ರಸ್ತರಿಗಾಗಿ ಬೊಂಡಂತಿಲದಲ್ಲಿ ಗುರುತಿಸಲಾದ ಸರ್ಕಾರಿ ಜಾಗಕ್ಕೆ ನೀರುಮಾರ್ಗ ಪಂಚಾಯಿತಿಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಆ ಜಾಗವನ್ನೂ ಕೈಬಿಡಲಾಗಿತ್ತು. ಕಂದಾಯ ಇಲಾಖೆ ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ನಾರ್ಲಪದವಿನಲ್ಲಿ ಗುರುತಿಸಿದ ಜಾಗದ ಸ್ಥಿತಿ ಏನು ಎಂಬುದು ಇದುವರೆಗೂ ಇತ್ಯರ್ಥವಾಗಿಲ್ಲ. ಈ ಮಧ್ಯೆ ಸ್ಥಳಾಂತರಗೊಂಡಿರುವ ಕೆಲವು ಕುಟುಂಬಗಳು ಮರಳಿ ಮಠದಗುಡ್ಡೆಗೆ ಬಂದಿವೆ.

    ಬಾಡಿಗೆ ಪಾವತಿ ಕಷ್ಟ: ಮನೆ, ಕೆಲಸವಿಲ್ಲದ ನಮ್ಮಿಂದ ಬೇರೆಡೆ ಬಾಡಿಗೆ ಪಾವತಿಸಲು ಸಾಧ್ಯವಾಗಿಲ್ಲ. ಸರ್ಕಾರ ಭರವಸೆ ನೀಡಿದೆಯಷ್ಟೇ, ಬಾಡಿಗೆ ನೀಡಿಲ್ಲ. ದುರ್ಘಟನೆ ವೇಳೆ ಕಂಬಗಳು ಉರುಳಿದ್ದರಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಆದರೆ ವಿದ್ಯುತ್ ಸಂಪರ್ಕವಿಲ್ಲದ 11 ಕುಟುಂಬಗಳಿಗೆ ಬಿಲ್ ಬರುತ್ತಿದೆ ಎಂದು ಸಂತ್ರಸ್ತ ಕುಟುಂಬದ ಇಸ್ಮಾಯಿಲ್, ಲಮ್ಲತ್, ಆತಿಕ್, ಹಮೀದ್ ಇಸ್ಮಾಯಿಲ್ ಅಲವತ್ತುಕೊಂಡಿದ್ದಾರೆ.

    ನನಗೆ ಇದುವರೆಗೆ 4,848 ರೂ ಬಿಲ್ ಬಂದಿದೆ. ನಮ್ಮ ಸಮಸ್ಯೆಗಳ ಬಗ್ಗೆ ಪಂಚಾಯಿತಿ, ಜಿಲ್ಲಾಡಳಿತಕ್ಕೆ ಮನವಿ ನೀಡುವುದೇ ಕೆಲಸವಾಯಿತು. ನಮ್ಮ ಸುತ್ತಲಿನ ಮನೆಯವರಿಗೆ (ಯೆಲ್ಲೋ, ರೆಡ್ ಜೋನ್‌ನ) ವಿದ್ಯುತ್ ಪೂರೈಕೆ ಆಗುತ್ತಿದೆ. ನಮ್ಮ ಕಷ್ಟವನ್ನು ಯಾರಲ್ಲಿ ಹೇಳುವುದು? ಶಾಸಕರು, ಸ್ಥಳೀಯ ಸದಸ್ಯರಲ್ಲೂ ಸಮಸ್ಯೆ ತೋಡಿಕೊಂಡಿದ್ದೇವೆ.
    ಇಸ್ಮಾಯಿಲ್
    ಮಠದಗುಡ್ಡೆ ಭೂ ಕುಸಿತ ಸಂತ್ರಸ್ತರು

    ಗುರುಪುರ ಮಠದಗುಡ್ಡ ಪ್ರದೇಶದಲ್ಲಿ ಸಂಭವಿಸಿರುವ ಗುಡ್ಡ ಕುಸಿತ ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಜಾಗ ಹಂಚಿಕೆ ವಿಷಯದಲ್ಲಿ ಇನ್ನೆರಡು ದಿನದಲ್ಲಿ ಮಂಗಳೂರು ತಹಸೀಲ್ದಾರ್ ಜತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದೇವೆ. ವಿದ್ಯುತ್ ಸಂಪರ್ಕವಿಲ್ಲದಿದ್ದರೂ ವಿದ್ಯುತ್ ಬಿಲ್ ಬರುತ್ತಿರುವ ಬಗ್ಗೆಯೂ ಚರ್ಚಿಸುವೆ. ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಮನೆ ಬಾಡಿಗೆ ನೀಡುವ ವಿಷಯದಲ್ಲಿ ಸ್ಥಳೀಯ ಪಂಚಾಯಿತಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.
    ಶಿವಪ್ರಸಾದ್
    ಉಪ-ತಹಸೀಲ್ದಾರ್, ಗುರುಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts