More

    ಮಾರುಕಟ್ಟೆಗೆ ನಿರೀಕ್ಷೆಗೂ ಮೀರಿ ಬಂದ ಜನ

    ಹಾವೇರಿ: ಜಿಲ್ಲೆಯಲ್ಲಿ ಜೂ. 21ರವರೆಗೆ ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡುತ್ತಿದ್ದಂತೆ ಸೋಮವಾರ ಮಾರುಕಟ್ಟೆಗೆ ಜನರು ನಿರೀಕ್ಷೆಗೂ ಮೀರಿ ಲಗ್ಗೆ ಇಟ್ಟರು. ಕರೊನಾ ಜಿಲ್ಲೆಯಿಂದ ಹೊರಟೇ ಹೋಯಿತೇನೋ ಎಂಬಂತೆ ಪ್ರಮುಖ ರಸ್ತೆಗಳಲ್ಲಿ ಜನಜಂಗುಳಿ ಉಂಟಾಗಿದ್ದು, ಆತಂಕಕಾರಿಯಾಗಿತ್ತು.

    ಕರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಿರುವ 21 ಜಿಲ್ಲೆಗಳಲ್ಲಿ ಸರ್ಕಾರ ಕೆಲವೊಂದು ಕಠಿಣ ನಿಯಮಗಳನ್ನು ಸಡಿಲಗೊಳಿಸಿ ಅಗತ್ಯ ವಸ್ತುಗಳ ಖರೀದಿ ಸಮಯ ಹೆಚ್ಚಿಸಿದೆ. ಆದರೆ, ಜನತೆ ಪೂರ್ತಿ ಲಾಕ್​ಡೌನ್ ತೆರವುಗೊಂಡಿದೆ ಎಂಬಂತೆ ವರ್ತಿಸಲು ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗೆಯಿಂದಲೇ ನಗರದ ಮಾರುಕಟ್ಟೆಯಲ್ಲಿ ಜನ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದರು. ಕರೊನಾ ನಿಯಂತ್ರಣಕ್ಕೆ ಸ್ವಯಂ ಆಗಿ ಅಳವಡಿಸಿಕೊಳ್ಳಬಹುದಾದ ಪರಸ್ಪರ ಅಂತರ, ಮಾಸ್ಕ್ ಧರಿಸುವುದನ್ನು ಕೆಲವರು ಮರೆತು ಮಾರುಕಟ್ಟೆಯಲ್ಲಿ ಸಂಚಾರಿಸಿದರು. ಅಗತ್ಯ ವಸ್ತು ಖರೀದಿಸಿದರು.

    ಚಿನ್ನಾಭರಣ, ಕೆಲವೊಂದು ಬಟ್ಟೆ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ತೆರೆದಿದ್ದವು. ದೊಡ್ಡ ಅಂಗಡಿಗಳಿಗಿಂತ ಸೋಮವಾರ ಬೀದಿಬದಿಯಲ್ಲಿನ ಅಂಗಡಿಗಳೇ ಹೆಚ್ಚಾಗಿ ತೆರೆದಿದ್ದವು. ಇದರಿಂದ ರಸ್ತೆಯೂ ಇಕ್ಕಟ್ಟಾಗಿ ವಾಹನಗಳ ಸಂಚಾರಕ್ಕೂ ಅಡೆತಡೆಯಾಯಿತು. ಕೆಲವರು ಮಧ್ಯಾಹ್ನ 2 ಗಂಟೆಯ ನಂತರವೂ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರು. ನಂತರ ಪೊಲೀಸರು ನಗರದಲ್ಲಿ ರೌಂಡ್ ಹಾಕಿ ತೆರೆದ ಅಂಗಡಿಗಳನ್ನು ಮುಚ್ಚಿಸಿದರು. ನಗರದ ಪಿ.ಬಿ. ರಸ್ತೆ ಸೇರಿ ಕೆಲ ಪ್ರಮುಖ ಬೀದಿಗಳಲ್ಲಿ ಹಣ್ಣು, ಬಟ್ಟೆಗಳ ವ್ಯಾಪಾರ ಮಧ್ಯಾಹ್ನ 2ರ ನಂತರವೂ ಮುಂದುವರಿದಿತ್ತು.

    ಕರೊನಾ ಸಂಪೂರ್ಣವಾಗಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸರ್ಕಾರ ಸ್ವಲ್ಪ ಪ್ರಮಾಣದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದ ಜಿಲ್ಲೆಗಳಲ್ಲಿ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಸ್ವಲ್ಪ ಪ್ರಮಾಣದಲ್ಲಿ ಆರಂಭಗೊಂಡು ಜನಜೀವನ ಸುಧಾರಿಸಲಿ ಎಂಬ ಉದ್ದೇಶದಿಂದ ಅನ್​ಲಾಕ್ ಮಾಡಿದೆ. ಆದರೆ, ಜನತೆ ಕರೊನಾ ಸೋಂಕು ಪೂರ್ಣ ಹೋಗಿದೆ ಎನ್ನುವ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಇನ್ನೂ ಕೆಲ ದಿನಗಳ ಕಾಲ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯುವ ಕರೊನಾ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಇಲ್ಲವಾದರೆ ಮರಳಿ ಸೋಂಕು ಹೆಚ್ಚಿದರೆ ಮತ್ತೆ ಲಾಕ್​ಡೌನ್​ನ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ವಣವಾಗಲಿದೆ. ಅದಕ್ಕೆ ಜನರು ಅವಕಾಶ ನೀಡಬಾರದು.

    | ಬಾಪುಗೌಡ ಪಾಟೀಲ, ಉದ್ಯಮಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts