More

    ಮಹಾರಾಷ್ಟ್ರದ ಮಾಜಿ ಸಿಎಂ, ಮಾಜಿ ಲೋಕಸಭಾ ಸ್ಪೀಕರ್​ ಮನೋಹರ್​ ಜೋಶಿ ಹೃದಯಾಘಾತದಿಂದ ನಿಧನ

    ಮುಂಬೈ: ಮಾಜಿ ಲೋಕಸಭಾ ಸ್ಪೀಕರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ ಪಕ್ಷದ ಧೀಮಂತ ನಾಯಕ ಮನೋಹರ್​ ಜೋಶಿ ಇಂದು (ಫೆ.23) ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಜೋಶಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಬಳಲಿದ ಜೋಶಿ ಅವರನ್ನು ಫೆ.21ರಂದು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ 3.02ಕ್ಕೆ ಇಹಲೋಕ ತ್ಯಜಿಸಿದ್ದಾರೆ.

    ಇಂದು ಮಧ್ಯಾಹ್ನ 2 ಗಂಟೆಯ ನಂತರ ಮನೋಹರ ಜೋಶಿ ಅವರ ಅಂತ್ಯಕ್ರಿಯೆ ಆರಂಭವಾಗಲಿದೆ. ದಾದರ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

    ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ್ದ ಜೋಶಿ, 1967ರಲ್ಲಿ ರಾಜಕೀಯಕ್ಕೆ ಧುಮುಕಿದ್ದರು. 1995 ರಿಂದ 99ರವರೆಗೆ ಶಿವಸೇನಾ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಜೋಶಿ ಸೇವೆ ಸಲ್ಲಿಸಿದ್ದರು. 2002 ರಿಂದ 2004ರವರೆಗೆ ಲೋಕಸಭಾ ಸ್ಪೀಕರ್​ ಆಗಿದ್ದರು. ಹಿರಿಯ ನಾಯಕರಾಗಿದ್ದ ಜೋಶಿ ಕೆಲಕಾಲದಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.

    ಜೋಶಿಯವರು ಬಾಳಾಸಾಹೇಬ್ ಠಾಕ್ರೆಯ ನಂಬಿಕಸ್ಥರಲ್ಲಿ ಒಬ್ಬರು. ಶಿವಸೇನಾ ಪಕ್ಷದ ಅಡಿಯಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಕೌನ್ಸಿಲರ್ ಆಗಿ ಸ್ಥಾನ ಪಡೆಯಲು ಯಶಸ್ವಿಯಾದ ಬಳಿಕ ಜೋಶಿ ಅವರ ರಾಜಕೀಯ ಪ್ರಯಾಣ ಪ್ರಾರಂಭವಾಯಿತು. ಜೋಶಿ ಅವರು 1976 ರಿಂದ 1977ರ ಅವಧಿಯಲ್ಲಿ ಮುಂಬೈನ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್​)

    ಸುಳ್ಳು ಹೇಳಿದರೆ ಹೀಗೆ ಆಗೋದು… ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ!

    ಭುಗಿಲೆದ್ದ ಪೊಲೀಸರ ಆಕ್ರೋಶ: ಸರ್ಕಾರದ ವರ್ಗಾವಣೆ ಗ್ಯಾರಂಟಿ ನಂಬಿ ಸಿಬ್ಬಂದಿಗೆ ಭ್ರಮನಿರಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts