More

    ಪರೀಕ್ಷಾ ನಿರ್ವಹಣೆ ವಿವಿ ತೆಕ್ಕೆಗೆ!

    – ಶ್ರವಣ್ ಕುಮಾರ್ ನಾಳ, ಪುತ್ತೂರು

    ವಾರ್ಷಿಕ 22 ಲಕ್ಷ ರೂ.ವೆಚ್ಚದಲ್ಲಿ ಪೂರ್ಣಗೊಳಿಸಬಹುದಾದ ಮಂಗಳೂರು ವಿವಿ ಪರೀಕ್ಷೆ ನಿರ್ವಹಣೆ ಉದ್ದೇಶಕ್ಕೆ ಖಾಸಗಿ ನಿರ್ವಹಣಾ ಸಂಸ್ಥೆಗಳಿಗೆ ಕೋಟ್ಯಂತರ ರೂ.ನೀಡುವ ಅಧಿಕಾರಿಗಳ ದಂಧೆಗೆ ಮಂಗಳೂರು ವಿವಿ ಸಿಂಡಿಕೇಟ್ ಮಂಡಳಿ ಇತಿಶ್ರೀ ಹಾಡಿದೆ. ಪರೀಕ್ಷಾ ನಿರ್ವಹಣೆಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಯೋಜನೆಗೆ ವಿವಿ ಸಿಂಡಿಕೇಟ್ ಮಂಡಳಿ ಮುಂದಾಗಿ, ಈ ಹೆಜ್ಜೆಯಿಂದಾಗಿ ವಿವಿಗೆ ವಾರ್ಷಿಕ 1.5 ಕೋಟಿ ರೂ.ಉಳಿತಾಯವಾಗಲಿದೆ.
    2015ರಿಂದ 2021ರ ಮುಂದಿನ 1-2 ತಿಂಗಳ ವರೆಗೆ ಮಂಗಳೂರು ವಿವಿಯ ಪರಿಕ್ಷಾ ನಿರ್ವಹಣೆಯನ್ನು Atrs technology ಎಂಬ ಸಂಸ್ಥೆ ನಿರ್ವಹಿಸುತ್ತಿದೆ. ಈ ಸಂಸ್ಥೆಗೆ 5 ವರ್ಷದಲ್ಲಿ ಪರೀಕ್ಷಾ ನಿರ್ವಹಣಾ ವೆಚ್ಚವಾಗಿ 11 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಿವಿ ಪಾವತಿಸುವ ಒಪ್ಪಂದ ಇದೆ. 2010ರಿಂದ 2015ರ ವರೆಗೆ ಮೆಟೈ ಟೆಕ್ನೋಲಜಿ ಸಂಸ್ಥೆ ವಿವಿ ಪರೀಕ್ಷಾ ನಿರ್ವಹಣೆ ಮಾಡುತ್ತಿತ್ತು. ಮಂಗಳೂರು ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳ ಡೇಟಾ, ಫಲಿತಾಂಶ ವಿವರ ಸೇರಿದಂತೆ 10 ಲಕ್ಷಕ್ಕೂ ಅಧಿಕ ಡೇಟಾ ಪ್ರಸ್ತುತ ಖಾಸಗಿ ಸಂಸ್ಥೆಯ ಅಧೀನದಲ್ಲಿದೆ. ಈ ಡೇಟಾ ಮರಳಿ ಪಡೆಯಬೇಕಿದೆ. ಖುದ್ದು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಪರೀಕ್ಷಾ ನಿರ್ವಹಣೆ ನಡೆಸುವ ರಾಜ್ಯದ ಮೊದಲ ಹಾಗೂ ಏಕೈಕ ಸರ್ಕಾರಿ ವಿವಿ ಎಂಬ ಹೆಗ್ಗಳಿಕೆಗೂ ಮಂಗಳೂರು ವಿವಿ ಪಾತ್ರವಾಗಲಿದೆ.

    ಆತ್ಮನಿರ್ಭರ ಕ್ರಮದನ್ವಯ ಸಾಫ್ಟ್‌ವೇರ್: ವಿವಿ ಪರೀಕ್ಷಾ ನಿರ್ವಹಣೆ ಹಾಗೂ 15 ಲಕ್ಷ ಡೇಟಾ ರಕ್ಷಣೆಗೆ ಮಂಗಳೂರು ವಿವಿಯಿಂದ ಸಾಫ್ಟ್‌ವೇರ್ ಅಭಿವೃದ್ಧಿ ಯೋಜನಾ ಪ್ರಸ್ತಾ ವನೆಯನ್ನು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ್ ಸಭೆಯಲ್ಲಿ ಮುಂದಿಟ್ಟು ಯೋಜನಾ ಅನುಷ್ಠಾನಕ್ಕೆ ಅನುಮೋದನೆ ಪಡೆದಿದ್ದಾರೆ. ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ಸಲಹಾಧಿಕಾರಿ ಹರೀಶ್ ಶೆಟ್ಟಿ ನೇತೃತ್ವದಲ್ಲಿ ವಿವಿ ಪರೀಕ್ಷಾ ನಿರ್ವಹಣಾ ತಂತ್ರಾಂಶ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ. ವಿವಿ ಅಧಿಕಾರಿಗಳು ಹಾಗೂ ವಿವಿ ಸಂಯೋಜನೆಗೊಂಡಿರುವ 210 ಕಾಲೇಜುಗಳ ಪರೀಕ್ಷಾ ನಿರ್ವಹಣಾ ಅಧಿಕಾರಿಗಳ ಸಭೆ ನಡೆಸಿ ತರಬೇತಿ ನೀಡಲಾಗಿದೆ.

    ಪರೀಕ್ಷಾ ನಿರ್ವಹಣೆ ಖಾಸಗಿ ಸಂಸ್ಥೆಗೆ ಕೋಟ್ಯಂತರ ರೂ. ವಿನಿಯೋಗಿಸುವ ಬದಲು ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಪರೀಕ್ಷಾ ನಿರ್ವಹಣೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ವಿವಿಯಿಂದ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸುವ ಯೋಜನೆಗೆ ವಿವಿ ಸಿಂಡಿಕೇಟ್ ಮಂಡಳಿ ಅನುಮೋದನೆ ಪಡೆಯಲಾಗಿದೆ.
    – ರಮೇಶ್, ಸಿಂಡಿಕೇಟ್ ಸದಸ್ಯ, ಮಂಗಳೂರು ವಿವಿ

    ವಿದ್ಯಾರ್ಥಿಗಳ ಪಲಿತಾಂಶ ಪ್ರಕಟಣೆಯಲ್ಲಿ ಈ ಹಿಂದೆ ಲೋಪದೋಷಗಳಿಂದಾಗಿ ತೊಂದರೆಯಾಗಿದೆ. ಇದನ್ನೆಲ್ಲಾ ಸರಿಪಡಿಸುವ ಸಲುವಾಗಿ ಪರೀಕ್ಷಾಂಗ ಮಂಡಳಿ ಹೊಸ ಪ್ರಯೋಗ ಮಾಡುತ್ತಿದೆ. ನೂತನ ಯೋಜನೆಯಿಂದ ವಿವಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
    – ಪ್ರೊ. ಪಿ.ಎಲ್.ಧರ್ಮ, ಪರೀಕ್ಷಾಂಗ ಕುಲಸಚಿವರು, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts