ಸಂಡೂರು: ತಾಲೂಕಿನ ಬಂಡ್ರಿ ಪಿಎಚ್‌ಸಿ ವ್ಯಾಪ್ತಿಯ 45 ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕ ಮಕ್ಕಳ ಗುರುತಿಸಿ ಚಿಕಿತ್ಸೆ ನೀಡಲು ವಿಶೇಷ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‌ಒ ಡಾ.ವೈ.ರಮೇಶ್ ಬಾಬು ಹೇಳಿದರು.
ಬಂಡ್ರಿಯ ಅಂಗನವಾಡಿ ಕೇಂದ್ರದಲ್ಲಿ ಮಗುವಿನ ಆರೋಗ್ಯ ತಪಾಸಣೆ ಮಾಡಿ ಮಾತನಾಡಿದರು. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ. 45 ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ಹುಟ್ಟಿನಿಂದ 6 ವರ್ಷದೊಳಗಿನ 3600 ಮಕ್ಕಳ ತಪಾಸಣೆಗೆ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ವಯಸ್ಸು-ಎತ್ತರಕ್ಕೆ ತಕ್ಕ ತೂಕ, ತೊಳಿನ ಸುತ್ತಳತೆ ಮೂಲಕ ಮಕ್ಕಳ ಅಪೌಷ್ಟಿಕತೆಯನ್ನು ಗುರುತಿಸಲಾಗುತ್ತದೆ. 9 ಆರ್‌ಬಿಎಸ್‌ಕೆ ಮೂರು ಸಂಚಾರಿ ಆರೋಗ್ಯ ಘಟಕಗಳು 45 ಅಂಗನವಾಡಿ, 36 ಆಶಾ ಕಾರ್ಯಕರ್ತೆಯರನ್ನು ತಪಾಸಣೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ನಿರೂಪಣಾಧಿಕಾರಿ ರಾಮಕೃಷ್ಣ, ಪ್ರಭಾರ ಟಿಎಚ್‌ಒ ಡಾ.ಭರತ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ, ಎಳೆನಾಗಪ್ಪ, ಮೋಹನಕುಮಾರಿ, ಪ್ರದೀಪ್, ಡಾ.ಸುನೀತಾ, ಡಾ.ಅಕ್ಷಯ್ ಶಿವಪುರೆ, ಡಾ.ಚಂದ್ರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಗಿರೀಶ್ ಇತರರಿದ್ದರು.