More

    ಜಾನುವಾರುಗಳ ಆರೋಗ್ಯ ಕಾಪಾಡುವುದು ಅತಿಮುಖ್ಯ

    ಹಿರೀಸಾವೆ: ಜಾನುವಾರುಗಳಿಂದ ಕೇವಲ ಆದಾಯದ ನಿರೀಕ್ಷೆಯಷ್ಟೇ ಅಲ್ಲದೆ ಅವುಗಳ ಆರೋಗ್ಯದ ಕಡೆಗೂ ಹೆಚ್ಚು ಆದ್ಯತೆ ನೀಡಬೇಕು ಎಂದು ಹಿರೀಸಾವೆ ಪಶು ಆರೋಗ್ಯ ಕೇಂದ್ರದ ಪಶು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಸಲಹೆ ನೀಡಿದರು.

    ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪಾಠಶಾಲೆಯ ಆವರಣದಲ್ಲಿ ಹಿರೀಸಾವೆ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬುಧವಾರ ರಾತ್ರಿ ಆಯೋಜಿಸಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿ, ರೈತರ ಮೂಲ ಕಸುಬು ಕೃಷಿಯಾಗಿದ್ದು, ಉಪ ಕಸುಬಾಗಿ ಹೈನುಗಾರಿಕೆಯನ್ನು ಅಳವಡಿಸಿಕೊಂಡಲ್ಲಿ ಆರ್ಥಿಕವಾಗಿ ಬದುಕು ಸದೃಢಗೊಳ್ಳಲಿದೆ. ಮಿಶ್ರತಳಿ ಹಸು, ಕುರಿ, ಮೇಕೆ ಸಾಕಣೆ ವ್ಯವಸ್ಥೆಯಿಂದ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಎಂದರು.

    ಆದರೆ ನಾವು ಆದಾಯವನ್ನಷ್ಟೇ ಅಲ್ಲದೆ ರಾಸುಗಳ ಆರೋಗ್ಯದ ಕಡೆಗೆ ಸಾಕಷ್ಟು ಗಮನ ಹರಿಸಬೇಕು. ಕೊಟ್ಟಿಗೆಯ ಶುಚಿತ್ವ ಕಾಪಾಡಬೇಕಿದ್ದು, ಉತ್ತಮ ಮೇವು ಹಾಗೂ ಪೌಷ್ಟಿಕ ಆಹಾರ ನೀಡುವುದು ಸೂಕ್ತವಾಗಲಿದೆ. ಜತೆಗೆ ವಾರದಲ್ಲಿ ಒಂದೆರಡು ಬಾರಿ ರಾಸುಗಳ ಮೈ ತೊಳೆಯುವುದು ಅಗತ್ಯ ಎಂದು ತಿಳಿಸಿದರು.

    ಮನುಷ್ಯನಂತೆಯೇ ಜಾನುವಾರುಗಳಲ್ಲಿ ಹತ್ತಾರು ಕಾಯಿಲೆಗಳು ಕಾಣಿಸಿಕೊಳ್ಳಲಿವೆ. ಆದರೆ ಅವುಗಳಿಗೆ ತನ್ನ ನೋವನ್ನು ಹೇಳಿಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಸದಾ ಅವುಗಳ ನಡುವೆ ಇದ್ದು ಆರೋಗ್ಯದಲ್ಲಿನ ಏರುಪೇರುಗಳನ್ನು ಗಮನಿಸಿ ಅಗತ್ಯ ಚಿಕಿತ್ಸೆ ಕೊಡಿಸುವುದು ನಮ್ಮ ಜವಾಬ್ದಾರಿಯ ಜತೆಗೆ ಮಾನವೀಯತೆಯಾಗಲಿದೆ ಎಂದರು.

    ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಕೆ.ಸುಧಾಕರ್, ರೇಣುಕಾ ಸೋಮಶೇಖರ್, ಮಾಜಿ ಸದಸ್ಯ ರವಿಕುಮಾರ್, ಸಹಶಿಕ್ಷಕ ಪುರುಷೋತ್ತಮ್, ಶಿಬಿರಾಧಿಕಾರಿ ಕುಮಾರ್, ಸಹಾಯಕ ಶಿಬಿರಾಧಿಕಾರಿ ಆಶಾ ಮತ್ತಿತರರಿದ್ದರು. ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts