More

    ಪುತ್ರನಿಂದ ಬ್ರಹ್ಮಜ್ಞಾನ ಪಡೆದ ಮಹಾತಾಯಿ ದೇವಹೂತಿ

    ತನ್ನ ಪುತ್ರ ಶ್ರೀಮನ್ನಾರಾಯಣನೇ ಎಂದು ಅರಿತ ದೇವಹೂತಿ ಅವನನ್ನು ಏಕಾಂತದಲ್ಲಿ ಕಂಡು ನಮಸ್ಕರಿಸಿ ‘‘ನೀನ್ಯಾರೆಂದು ನಿನ್ನ ತಂದೆಯವರಿಂದ ತಿಳಿದಿದ್ದೇನೆ. ನನಗೆ ಭಗವಂತನ ಮಾರ್ಗವನ್ನು ತಿಳಿಸಿಕೊಡು’’ ಎಂದು ಬೇಡುತ್ತಾಳೆ. ತಾಯಿಗೆ ಕಪಿಲರು ಸಾಂಖ್ಯಯೋಗದರ್ಶನವನ್ನು ಉಪದೇಶಿಸುತ್ತಾರೆ.

    | ರಾಮಚಂದ್ರ ಭಾಷ್ಯಂ 
    ಹಿಮಾಲಯದ ಪರ್ವತ ಶ್ರೇಣಿ. ಪಾರ್ವತೀ- ಪರಮೇಶ್ವರರು ವಿಹರಿಸುವ ತಾಣ. ಅಲ್ಲೊಂದು ಸುಂದರ, ರಮಣೀಯ ಆಶ್ರಮ. ಕರ್ದಮ ಮಹರ್ಷಿಗಳು ಆಸೀನರಾಗಿದ್ದಾರೆ. ಅಲ್ಲಿಗೆ ಸ್ವಾಯಂಭುವ ಮನು, ಅವರ ಪತ್ನಿ ಶತರೂಪಾ ಮತ್ತು ಪುತ್ರಿ ದೇವಹೂತಿಯರು ಆಗಮಿಸುತ್ತಾರೆ. ಕರ್ದಮರನ್ನು ಏಕಾಂತದಲ್ಲಿ ಕಂಡ ಸ್ವಾಯಂಭುವ ಮನುವು, ತನ್ನ ಮಗಳಾದ ದೇವಹೂತಿಯನ್ನು ವರಿಸುವಂತೆ ಕರ್ದಮರಲ್ಲಿ ಪ್ರಾರ್ಥಿಸುತ್ತಾನೆ. ಬ್ರಹ್ಮಚರ್ಯಾಶ್ರಮದಲ್ಲಿ ಸಾಧಿಸಬೇಕಾದ ಭಗವತ್ಸಾಕ್ಷಾತ್ಕಾರ ಸಿದ್ಧಿಗಳನ್ನೆಲ್ಲ ಪಡೆದ ಕರ್ದಮರು, ವಂಶವೃದ್ಧಿಗೋಸ್ಕರ ಗೃಹಸ್ಥಾಶ್ರಮವನ್ನು ಸ್ವೀಕರಿಸುವ ಉದ್ದೇಶದಿಂದ ಪರವಾಸುದೇವನನ್ನು ಕುರಿತು ತಪಸ್ಸು ಮಾಡಿರುತ್ತಾರೆ. ಪ್ರತ್ಯಕ್ಷನಾದ ಭಗವಂತ ನಿನಗೆ ಯೋಗ್ಯಳಾದ ಕನ್ಯೆಯು ತಾನಾಗಿಯೇ ಶೀಘ್ರದಲ್ಲಿ ಬರುವವಳಿದ್ದಾಳೆ. ಸ್ವಾಯಂಭುವ ಮನುವಿನ ಪುತ್ರಿ. ಅವಳನ್ನು ನೀನು ವಿವಾಹವಾಗು. ನಾನೇ ನಿನ್ನ ವೀರ್ಯದಲ್ಲಿ ಇಳಿದು, ನಿನಗೆ ಪುತ್ರನಾಗಿ ಜನಿಸುವೆ ಎಂಬ ವರ ಕೊಟ್ಟಿರುತ್ತಾನೆ. ಇದನ್ನು ನೆನೆದ ಕರ್ದಮರು- ತಾನು ಸಂತಾನೋತ್ಪತ್ತಿಯವರೆಗೂ, ಗೃಹಸ್ಥ ಧರ್ಮಪಾಲಿಸಿ ಅನಂತರ ಸಂನ್ಯಾಸಧರ್ಮಕ್ಕೆ ಮನಕೊಡುವೆನೆಂಬ ನಿಬಂಧನೆಯ ಮೇಲೆ ವಿವಾಹಕ್ಕೆ ಸಮ್ಮತಿಸುತ್ತಾರೆ, ಒಪ್ಪಿದ ರಾಜದಂಪತಿ, ದೇವಹೂತಿಯನ್ನು ಕರ್ದಮರಿಗೆ ವಿವಾಹ ಮಾಡಿಕೊಡುತ್ತಾರೆ.

    ತಾನಿರುವುದು ಒಬ್ಬ ಋಷಿವರೇಣ್ಯರ ಆಶ್ರಮವೆಂದು ಅರಿತ ದೇವಹೂತಿ, ರಾಜಪುತ್ರಿಯೆಂದು ಮರೆತು, ಆಶ್ರಮದ ಗಾಂಭೀರ್ಯಕ್ಕೆ ತಕ್ಕಂತೆ, ಸರ್ವಜ್ಞರಾದ ಕರ್ದಮರ ಸೇವೆಯಲ್ಲಿ ನಿರತಳಾಗುತ್ತಾಳೆ, ಹಲವು ಕಾಲದ ಸೇವೆಯಿಂದ ಸೊರಗಿದ ರಾಜಕುಮಾರಿಯನ್ನು ಕಂಡ ಕರ್ದಮರು, ಅವಳಿಗೆ ದೇವತೆಗಳ ಭೋಗವನ್ನು ಅನುಭವಿಸಲು ಯೋಗ್ಯವಾದಂತಹ ದಿವ್ಯದೇಹವನ್ನು ಅನುಗ್ರಹಿಸುತ್ತಾರೆ, ತಮ್ಮ ತಪೋಬಲದಿಂದ. ಕಾಲಕ್ರಮದಲ್ಲಿ ಕರ್ದಮ-ದೇವಹೂತಿಯರಿಗೆ 9 ಸ್ತ್ರೀ ರತ್ನಗಳು ಜನಿಸುತ್ತವೆ. ಅವರನ್ನೆಲ್ಲಾ ವಿವಾಹ ಮಾಡಿಕೊಡುತ್ತಾರೆ.

    ಇಷ್ಟೆಲ್ಲಾ ಭೋಗ ಭಾಗ್ಯಗಳಿದ್ದರೂ ದೇವಹೂತಿಯ ಮನದಲ್ಲಿ ಒಂದು ಕೊರತೆ – ತಾನೊಬ್ಬ ಬ್ರರ್ಹ¾ಯ ಪತ್ನಿಯಾದರೂ ಅವರಿಂದ ಬ್ರಹ್ಮ ಮಾರ್ಗವನ್ನು ತಿಳಿದುಕೊಳ್ಳಲಿಲ್ಲವಲ್ಲವೆಂದು. ಪತಿಯನ್ನು ಏಕಾಂತದಲ್ಲಿ ಕಂಡ ಅವಳು, ಬ್ರಹ್ಮಕ್ಕೆ ದಾರಿಯನ್ನು ಬೇಡುತ್ತಾಳೆ. ಮಹಾಜ್ಯೋತಿಯನ್ನು ಗರ್ಭದಲ್ಲಿ ಧರಿಸಿರುವಳೆಂದು ಅರಿತ ಅವರು, ದೇವಹೂತಿಗೆ ತಿಳಿಸುತ್ತಾರೆ ನಿನ್ನ ಗರ್ಭದಲ್ಲಿ ಈಗ ಬೆಳಗುತ್ತಿರುವವನು ಸಾಕ್ಷಾತ್ ಶ್ರೀಮನ್ನಾರಾಯಣನೇ. ಅವನೇ ನಿನಗೆ ದಾರಿಯನ್ನು ತೋರಿಸುತ್ತಾನೆ. ಈಗ ನನ್ನ ಗೃಹಸ್ಥಧರ್ಮದ ಸಂಕಲ್ಪ ಮುಗಿದಿರುವುದರಿಂದ, ಮಾತಿನಂತೆ ಸನ್ಯಸ್ಥನಾಗುತ್ತೇನೆ ಎಂದು ತಿಳಿಸಿ ಹೊರಡುತ್ತಾರೆ.

    ದೇದೀಪ್ಯಮಾನವಾದ ಶಿಶು ಜನಿಸುತ್ತದೆ. ತಾನ್ಯಾರೆಂದು ಹುಟ್ಟಿನಿಂದಲೇ ಅರಿತ ಮಗು, ಶೀಘ್ರವಾಗಿ ಬೆಳೆದು ತಾರುಣ್ಯಕ್ಕೆ ಕಾಲಿಡುತ್ತದೆ, ಕಪಿಲರಾಗಿ, ಮಹಾಮುನಿಯಾಗಿ. ಬೆಳೆದುನಿಂತ ದಿವ್ಯ ಮಂಗಲಸುಂದರಾಂಗನಾದ ಪುತ್ರ ಶ್ರೀಮನ್ನಾರಾಯಣನೇ ಎಂದು ಅರಿತ ದೇವಹೂತಿ ಅವನನ್ನು ಏಕಾಂತದಲ್ಲಿ ಕಂಡು ನಮಸ್ಕರಿಸಿ ನೀನ್ಯಾರೆಂದು ನಿನ್ನ ತಂದೆಯವರಿಂದ ತಿಳಿದಿದ್ದೇನೆ. ನನಗೆ ಭಗವಂತನ ಮಾರ್ಗವನ್ನು ತಿಳಿಸಿಕೊಡು ಎಂದು ಬೇಡುತ್ತಾಳೆ. ತಾಯಿಗೆ ಕಪಿಲರು ಸಾಂಖ್ಯಯೋಗದರ್ಶನವನ್ನು ಉಪದೇಶಿಸುತ್ತಾರೆ. ಭಕ್ತಿಯಿಂದ, ಧ್ಯಾನದಿಂದ ಹೇಗೆ ಬಂಧನದಿಂದ ಬಿಡುಗಡೆ ಹೊಂದುವುದು ಎಂಬುದೆಲ್ಲವನ್ನೂ ತಿಳಿಸಿಕೊಟ್ಟು, ತನ್ನ ಮೂರ್ತಿಯೇ ಒಳಮಾರ್ಗದಲ್ಲಿ ಕೊಂಡೊಯ್ಯುವ ಮಂಗಲವಿಗ್ರಹವಾದುದರಿಂದ ಅದನ್ನೇ ಹೇಗೆ ಧ್ಯಾನ ಮಾಡುವುದೆಂದು ತಿಳಿಸಿಕೊಟ್ಟು, ನಾನು ನಿನಗೆ ಬಹಳ ಪ್ರಿಯವಾದವನು, ದೇಹ ಸಂಬಂಧದಿಂದ ಮಾತ್ರವಲ್ಲ, ಆತ್ಮಸಂಬಂಧದಿಂದಲೂ ಕೂಡ. ನನ್ನನ್ನು ಪ್ರೀತಿಯಿಂದ, ಅಥವಾ ಭಕ್ತಿಯಿಂದ, ತಂದೆಯಾಗಿ, ಗುರುವಾಗಿ ಕೊನೆಗೆ ನಾನೇ ಆತ್ಮವೆಂದು ಧ್ಯಾನಮಾಡಮ್ಮ ತಿಳಿಯಿತೇ?ಅರ್ಥವಾಯಿತೇ? ಮನಸ್ಸಿಗೆ ಬಂತೇ? ಎಂದು ಮತ್ತೆಮತ್ತೆ ಕೇಳಿ, ಅವಳಿಗೆ ತಿಳಿಯಿತೆಂದು ಮನದಟ್ಟು ಮಾಡಿಕೊಂಡು, ತಾನೂ ಈಶಾನ್ಯ ದಿಕ್ಕಿಗೆ ತಪಸ್ಸಿಗೆ ಹೊರಡುತ್ತಾರೆ.

    (ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)

    ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts