More

    ಮಗುವಿಗೆ ಜನ್ಮ ನೀಡಿ ತಾಯಿ ಸಾವು ; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ; ತಿಪಟೂರು ಠಾಣೆಗೆ ದೂರು ನೀಡಿದ ಪತಿ

    ತಿಪಟೂರು : ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ನಂತರ ಮಹಿಳೆ ಮೃತಪಟ್ಟಿದ್ದು, ವೈದ್ಯರ ಕರ್ತವ್ಯಲೋಪವೇ ಸಾವಿಗೆ ಕಾರಣ ಎಂದು ಮೃತಳ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಿಬ್ಬನಹಳ್ಳಿ ಹೋಬಳಿ ಕುಂದೂರಿನ ಮಮತಾ (34) ಮೃತೆ. ಚೇತನ್ ಪಟೇಲ್ ಅವರು ಪತ್ನಿ ಮಮತಾ ಅವರನ್ನು ಮೂರು ದಿನಗಳ ಹಿಂದೆ ನಗರದ ಜೇನುಕಲ್ ನರ್ಸಿಂಗ್ ಹೋಂಗೆ ದಾಖಲಿಸಿದ್ದರು. ಸಾಮಾನ್ಯ ಹೆರಿಗೆ ಆಗುತ್ತೆ ಎಂದು ಅಭಿಪ್ರಾಯಪಟ್ಟಿದ್ದ ವೈದ್ಯರು ಭಾನುವಾರ ಸಿಸೇರಿಯನ್ ಮಾಡಿದ್ದರು. ಗಂಡು ಮಗು ಜನಿಸಿತ್ತು, ಆದರೆ ಜನ್ಮ ನೀಡಿದ ಸ್ವಲ್ಪ ಹೊತ್ತಿನಲ್ಲೇ ಮಮತಾ ಮೃತಪಟ್ಟರು.

    ಹೆರಿಗೆ ನಂತರ ಮಗು ನೋಡಲು ಹೋದಾಗ ಪತ್ನಿ ಮಮತಾಳ ಬಾಯಿಂದ ರಕ್ತ ಬರುತ್ತಿದ್ದುದನ್ನು ಗಮನಿಸಿದ್ದೆ. ಅಷ್ಟರೊಳಗೆ ನಮ್ಮ ಗಮನಕ್ಕೆ ತಾರದೆ ಪತ್ನಿಯ ಶವವನ್ನು ಪೊಲೀಸರ ಸಹಾಯದಿಂದ ನಗರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಪತ್ನಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟಿಸಿ, ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
    ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಎಫ್‌ಎಸ್‌ಎಲ್ ವರದಿ ಬಂದ ನಂತರ ಬಾಣಂತಿ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

    ಹೆರಿಗೆ ಸಂದರ್ಭ ಬಾಣಂತಿ ಶರೀರದಲ್ಲಿ ದಿಢೀರನೆ ರಕ್ತ ಹೆಪ್ಪುಗಟ್ಟಿ, ಹೃದಯಕ್ಕೆ ರಕ್ತ ಪೂರೈಕೆ ಕಡಿಮೆ ಆಗಿ, ರಕ್ತ ನಾಳಗಳು ಒಡೆಯುವುದು, ರಕ್ತ ಹೆಪ್ಪುಗಟ್ಟುವುದು ಹಾಗೂ ಶ್ವಾಸಕೋಶಕ್ಕೆ ಸೇರಿದ ರಕ್ತ ಹೃದಯಕ್ಕೆ ಹೋಗಲಾಗದೆ ಬಾಯಿಂದ ಹೊರಬರುವುದು, ಹೃದಯದ ಪಂಪ್ ಫೇಲ್ಯೂರ್ ಆಗಿ ಸಾವು ಸಂಭವಿಸುವುದು, ಹೆರಿಗೆ ಸಮಯದಲ್ಲಿ ನೀರು ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅಪರೂಪಕ್ಕೊಮ್ಮೆ 10 ಸಾವಿರದಲ್ಲಿ ಒಬ್ಬರಿಗೆ ಈ ರೀತಿ ಸಾವು ಸಂಭವಿಸುತ್ತದೆ.
    ಡಾ.ರವಿ, ಪ್ರಸೂತಿ ತಜ್ಞರು, ಸರ್ಕಾರಿ ಆಸ್ಪತ್ರೆ, ತಿಪಟೂರು

    ಬಾಣಂತಿ ಸಾವಿನ ಸಂದರ್ಭದ ಅಂಶಗಳನ್ನು ವೈದ್ಯಕೀಯ ಗೂಗಲ್‌ನಲ್ಲಿ ಹುಡುಕಿದರೆ ತಕ್ಷಣ ಸಾವಿನ ನಿಖರ ಮಾಹಿತಿ ದೊರೆಯುತ್ತದೆ. ಎಲ್ಲದಕ್ಕೂ ವೈದ್ಯರನ್ನು ದೂರುವ ಮುಂಚೆ, ಬೇರೆ ಪರಿಣಿತ ವೈದ್ಯರನ್ನು ಸಂಪರ್ಕಿಸಿ ಸಾವಿನ ಕಾರಣ ತಿಳಿದುಕೊಳ್ಳುವ ಪ್ರಯತ್ನ ಅಗತ್ಯ. ಕಾನೂನಿನ ಪ್ರಕಾರ ಪೊಲೀಸರಿಗೆ ಮಾಹಿತಿ ನೀಡಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಎಫ್‌ಎಸ್‌ಎಲ್ ಪರೀಕ್ಷಾ ವರದಿ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ.
    ಡಾ.ಉಮೇಶ್, ವೈದ್ಯರು, ಜೇನುಕಲ್ ನರ್ಸಿಂಗ್ ಹೋಂ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts