More

    ಕಡಿಮೆ ವೋಲ್ಟೇಜ್, ಪಂಪ್‌ಸೆಟ್ ಡ್ಯಾಮೇಜ್!

    ಬೆಳಗಾವಿ: ಕೃಷಿ ಸಲಕರಣೆ, ಬಾಡಿಗೆ ಯಂತ್ರಗಳು, ಕಾರ್ಮಿರ ಕೂಲಿ ಏರಿಕೆ, ತೀವ್ರ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ರೈತರು ಇದೀಗ ಲೋ ವೋಲ್ಟೇಜ್ ವಿದ್ಯುತ್ ಪೂರೈಕೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕಬ್ಬು, ದ್ರಾಕ್ಷಿ, ಬಾಳೆ ಇತರ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡಿ ಹೋಗದಂತೆ ರೈತರು ಮೇಲಿಂದ ಮೇಲೆ ನೀರುಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಸ್ಕಾಂ ಪೂರೈಕೆ ಮಾಡುತ್ತಿರುವ ಕಡಿಮೆ ವೋಲ್ಟೇಜ್ ವಿದ್ಯುತ್‌ನಿಂದಾಗಿ ಬೆಳೆಗಳಿಗೆ ಸಾಕಾಗುವಷ್ಟು ನೀರು ಪೂರೈಸಲು ಆಗುತ್ತಿಲ್ಲ. ತ್ರಿಫೇಸ್ ಇದೆ ಎಂದು ಪಂಪ್ ಸ್ವಿಚ್ ಹಾಕಿದರೆ ನಾಲ್ಕೈದು ನಿಮಿಷದಲ್ಲಿ ಪಂಪ್ ಆಫ್ ಆಗುತ್ತದೆ. ತ್ರಿಫೇಸ್ ಬದಲು ಸಿಂಗಲ್ ಫೇಸ್ ಅಳವಡಿಸಿದ ಕೃಷಿಕರಿಗೂ ಇದೇ ಸಮಸ್ಯೆಯಿಂದ ರೈತರು ಕಂಗಲಾಗಿದ್ದಾರೆ.

    ವಿದ್ಯುತ್ ಅವ್ಯವಸ್ಥೆಯಿಂದ ಕೃಷಿ ತೋಟಕ್ಕೆ ನೀರು ಸಮರ್ಪಕವಾಗಿ ಪೂರೈಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದು ಪರಿಸ್ಥಿತಿ ಸುಧಾರಣೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಲೋ ವೋಲ್ಟೆಜ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಸ್ಕಾಂ ಅಧಿಕಾರಿಗಳು ನಿತ್ಯ 6 ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿದ್ದೇವೆ ಲೋ ವೋಲ್ಟೇಜ್, ಲೋಡ್ ಶೆಡ್ಡಿಂಗ್ ಯಾವುದೂ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ 250 ರಿಂದ 300 ವೋಲ್ಟೇಜ್‌ವರೆಗೆ ಮಾತ್ರ ಕರೆಂಟ್ ಇರುತ್ತದೆ. ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 450 ರಿಂದ 500 ವೋಲ್ಟೇಜ್ ವರೆಗೆ ವಿದ್ಯುತ್ ಇರಬೇಕು. ಆದರೆ, ಲೋ ವೋಲ್ಟೇಜ್‌ನಿಂದಾಗಿ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೆಸ್ಕಾಂ ವಿಭಾಗ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ, ಕೈಗಾರಿಕೆಗಳಿಗೆ, ನಿರಂತರ ಜ್ಯೋತಿ ಸೇರಿ ನಿತ್ಯ ಸುಮಾರು 1,780 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದೆ. ಸದ್ಯ ಜಿಲ್ಲೆಗೆ ಸುಮಾರು 921 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಚಿಕ್ಕೋಡಿ, ಅಥಣಿ, ಕಾಗವಾಡ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಮೂಡಲಗಿ, ಗೋಕಾಕ, ಸವದತ್ತಿ, ರಾಮದುರ್ಗ, ಬೆಳಗಾವಿ ತಾಲೂಕಿನಲ್ಲಿ ಸುಮಾರು 2.80 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ದಿನದಿಂದ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಮುಂದಿನ ಎರಡು ತಿಂಗಳ ಕಾಲ ಹೆಚ್ಚುವರಿಯಾಗಿ 525 ಮೆಗಾ ವ್ಯಾಟ್ ವಿದ್ಯುತ್ ಅವಶ್ಯಕತೆ ಎಂದು ಹೆಸ್ಕಾಂ ಅಭಿಯಂತ ತಿಳಿಸಿದ್ದಾರೆ.

    ಕಡಿಮೆ ಸಾಮರ್ಥ್ಯದ ಪರಿವರ್ತಕ

    ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ರೈತರ ಬೇಡಿಕೆಗೆ ಅನುಗುಣವಾಗಿ ಹೆಸ್ಕಾಂ ಅಲ್ಲಲ್ಲಿ 25 ಕೆವಿ, 50 ಕೆವಿ,100 ಕೆವಿ ಪರಿವರ್ತಕಗಳನ್ನು ಅಳವಡಿಸಿದೆ. 100 ಕೆವಿ ಪರಿವರ್ತಕದಿಂದ 20 ಎಚ್‌ಪಿ ಸಾಮರ್ಥ್ಯದ 5 ಕೃಷಿ ಪಂಪ್‌ಗಳಿಗೆ ನೀರು ಹರಿಸಲು ಸಾಧ್ಯವಿದೆ. ಇಲ್ಲಿ 10ಕ್ಕಿಂತ ಅಧಿಕ ಪಂಪ್‌ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ಸಾಮರ್ಥ್ಯದ ಕೊರತೆ ಹಾಗೂ ಲೋ ವೋಲ್ಟೇಜ್ ಉಂಟಾಗುತ್ತದೆ. ಇಲ್ಲಿ ಲಭ್ಯ ಇರುವ ವಿದ್ಯುತ್ ಸಾಲದೆ ಸಮಸ್ಯೆಯಾಗುತ್ತಿದೆ ಎಂದು ರೈತರು ದೂರಿದ್ದಾರೆ.

    ವಾರಕ್ಕೊಮ್ಮೆ ಪಂಪ್ ದುರಸ್ತಿ

    ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ಇತ್ತ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮತ್ತೊಂಧೆಡೆ ಲೋ ವೋಲ್ಟೇಜ್ ವಿದ್ಯುತ್‌ನಿಂದಾಗಿ ಕೃಷಿ ಪಂಪ್‌ಸಟ್‌ಗಳಿಗೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ವಾರಕ್ಕೊಮ್ಮೆ ಪಂಪ್ ಕೆಟ್ಟು ಹೋಗುತ್ತಿದ್ದು, ದುರಸ್ತಿಗಾಗಿ 4 ರಿಂದ 5 ಸಾವಿರ ರೂ. ವರೆಗೆ ಖರ್ಚು ಮಾಡಬೇಕಾಗಿದೆ. ನದಿ, ತೆರೆದ ಬಾವಿಗಳ ದಡದಲ್ಲಿ ಅಳವಡಿಸಿರುವ ನೂರಾರು ಪಂಪ್‌ಗಳು ಸ್ಟಾರ್ಟ್ ಆಗುತ್ತಿಲ್ಲ. ಹೆಸ್ಕಾಂ ತಕ್ಷಣ 500 ವೋಲ್ಟೇಜ್ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ತಿಮ್ಮಾಪುರ ಗ್ರಾಮದ ರೈತರ ಮಹಾಂತೇಶ ಪಾಟೀಲ, ಶಿವಪ್ಪ ನಾಯಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗುತ್ತಿದೆ. ಕೃಷಿ ಪಂಪ್‌ಗಳಿಗೆ ಲೋ ವೋಲ್ಟೇಜ್ ವಿದ್ಯುತ್ ಪೂರೈಕೆ ಕುರಿತು ಪರಿಶೀಲಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು.
    | ಗಿರೀಶ ಕುಲಕರ್ಣಿ ಹೆಸ್ಕಾಂ ಬೆಳಗಾವಿ ವಿಭಾಗದ ಅಭಿಯಂತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts