More

    ಕಾನನಕೊಪ್ಪಲಲ್ಲಿ ಕೆಲಕಾಲ ಮತದಾನ ಬಹಿಷ್ಕಾರ

    ಅರಕಲಗೂಡು: ತಾಲೂಕಿನ ಕಾನನಕೊಪ್ಪಲು ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಕೆಲಕಾಲ ಮತದಾನ ಬಹಿಷ್ಕರಿಸಿದರು.

    ಗ್ರಾಮದಲ್ಲಿ ಶಾಲಾ ಕಟ್ಟಡ ಸೇರಿದಂತೆ ಗ್ರಾಮಸ್ಥರಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಅಲ್ಲದೆ ಮತ ಚಲಾಯಿಸಲು ಬೇರೊಂದು ಗ್ರಾಮಕ್ಕೆ ತೆರಳಬೇಕು. ಕಳೆದ ಬಾರಿಯ ಚುನಾವಣೆಯಲ್ಲಿಯೂ ಬೇರೆ ಗ್ರಾಮಕ್ಕೆ ತೆರಳಿ ಮತ ಚಲಾಯಿಸುವಂತಾಗಿತ್ತು. ಇಲ್ಲಿಗೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ. ಹೀಗಾಗಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮದಲ್ಲಿ ಶಾಲೆ ಇಲ್ಲದ ಕಾರಣ ಮಕ್ಕಳು ಬೇರೆ ಊರಿನ ಶಾಲೆಗೆ ನಡೆದುಕೊಂಡು ಹೋಗಬೇಕಿದೆ. ಇದರಿಂದ ಕೆಲವು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ತೊಂದರೆ ಅನುಭವಿಸವಂತಾಗಿದೆ. ಗ್ರಾಮದಲ್ಲಿ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಹಾದು ಹೋಗಿದ್ದು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಿಲುಗಡೆ ನೀಡುತ್ತಿಲ್ಲ. ಪರಿಣಾಮವಾಗಿ ಅನಾರೋಗ್ಯಕ್ಕೀಡಾದ ವೃದ್ಧರು, ಮಹಿಳೆಯರು ಆಸ್ಪತ್ರೆಗೆ ತೆರಳಲು ಪರದಾಡುವಂತಾಗಿದೆ. ಊರಿನಲ್ಲಿ ಸಮರ್ಪಕವಾದ ರಸ್ತೆ ಮತ್ತು ಚರಂಡಿ ಸೌಲಭ್ಯ ಇಲ್ಲ. ಪಡಿತರ ಸಾಮಾಗ್ರಿಗಳನ್ನು ತರಲು ಸಹ ಬೇರೆ ಊರಿಗೆ ಅಲೆಯಬೇಕಿದೆ ಎಂದು ಗ್ರಾಮಸ್ಥರು ದೂರಿದರು.

    ನಮ್ಮ ಬೇಡಿಕೆಗಳನ್ನು ಆಲಿಸದೇ ಸಂಬಂಧಿಸಿದವರು ನಮ್ಮ ಮತದಾನದ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಕುಮಾರ್ ಅಸಮಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ ಮತದಾರರ ಮನವಿ ಆಲಿಸಿದರು. ಚುನಾವಣೆ ಕಳೆದ ಬಳಿಕ ತಹಸೀಲ್ದಾರ್ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ ಗ್ರಾಮಸ್ಥರ ಮನವೊಲಿಸಿದರು. ನಂತರ ಮತದಾನ ಮುಂದುವರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts