More

    ಪ್ರೇಮಕಥೆ: ಅಂಗವೈಕಲ್ಯ ಅಡ್ಡಿ ಆಗಲಿಲ್ಲ

    ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ… ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

    ಪ್ರೀತಿ ಅನ್ನೊಂದು ಒಂದು ಸುಂದರ ಪ್ರಪಂಚ. ನಾನು ಜಮೀಲಾ, ಅವರು ರಾಜಕುಮಾರ. ನಾವಿಬ್ಬರೂ 8 ವರ್ಷ ಪ್ರೀತಿಸಿ ಮದುವೆಯಾಗಿದ್ದೇವೆ. ನನ್ನ ಊರು ಗದಗ. ಅವರದು ಆಂಧ್ರಪ್ರದೇಶದ ಆದೋನಿ ತಾಲೂಕಿನ ಚಿಕ್ಕ ಹಳ್ಳಿ. ನಾನು ಬೆಟಗೇರಿ ಹಾಸ್ಟ್ಟೆಲ್​ನಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದೆ. ಅವರು ಗದಗ-ಬೆಟಗೇರಿ ಹಾಸ್ಟೆಲ್​ನಲ್ಲಿ ಇದ್ದರು. ನಮ್ಮಿಬ್ಬರ ಶಾಲೆ ಒಂದೇ. ಹೈಸ್ಕೂಲ್​ನಲ್ಲಿ ಪರಿಚಯವಾಯಿತು. ನಂತರ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ನಾನು ಅಂಗವಿಕಲಳು. ನಾನು ಬಿ.ಎ. ನಂತರ ಬಿ.ಎಡ್. ಮುಗಿಸುವವರೆಗೂ ನಾವು ವರ್ಷಕ್ಕೆ 2 ಸಲ ಮಾತ್ರ ಭೇಟಿಯಾಗುತ್ತಿದ್ದೆವು. ಆದರೆ ನಮ್ಮಿಬ್ಬರ ನಡುವೆ ಪತ್ರಗಳ ಸುರಿಮಳೆಯೇ ಆಗುತ್ತಿತ್ತು. ಕೊನೆಗೆ ನಮ್ಮ ಮನೆಯಲ್ಲಿ ಗೊತ್ತಾಗಿ ಮದುವೆಗೆ ಅಡ್ಡಿ ಮಾಡಿದರು. ನಾವು ಮುಸ್ಲಿಮರು, ಅವರು ಕ್ರಿಶ್ಚಿಯನ್ನರು. ಅವರ ಮನೆಯಲ್ಲಿ ತೊಂದರೆ ಇರಲಿಲ್ಲ. ನಮ್ಮ ಮನೆಯಲ್ಲಿ ಅಡ್ಡಿ ಮಾಡಿದ್ದಕ್ಕೆ ಅವರು ಕೇವಲ ನನಗೋಸ್ಕರ ನಮ್ಮ ಧರ್ಮಕ್ಕೆ ಮತಾಂತರ ಆಗಿ 2007ರ ಆಗಸ್ಟ್ 26ರಂದು ಮದುವೆಯಾದರು. ನಮಗೆ ಈಗ 11 ವರ್ಷದ ಮಗಳಿದ್ದಾಳೆ. ನಾವು ಎರಡೂ ಧರ್ಮ ಪಾಲಿಸುತ್ತಿದ್ದೇವೆ. ಈಗ ಗದಗದಲ್ಲಿ ಪುಟ್ಟ ಸಂಸಾರದೊಂದಿಗೆ ಸುಖವಾಗಿದ್ದೇವೆ. ನಾನು ಕಂಪ್ಯೂಟರ್ ಆಪರೇಟರ್. ಅವರು ಆಟೋ ಚಾಲಕ. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ನನ್ನನ್ನು ಹಾಗೂ ನನ್ನ ಮಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರೇ ನನ್ನ ಪ್ರಪಂಚ.

    | ಜಮೀಲಾ ರಿಯಾಜ್ (ರಾಜಕುಮಾರ್) ಪಠಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts