More

    ‘ಕೋಟಿ ವೀರ’ ವಾಚ್‌ಮನ್ ನಾಪತ್ತೆ !

    ಉಳ್ಳಾಲ: ಲಾಟರಿಯಲ್ಲಿ ಕೋಟಿ ರೂ.ಬಂಪರ್ ಬಹುಮಾನ ಪಡೆದಿರುವುದಾಗಿ ಹೇಳಿಕೊಂಡು ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿದ್ದ ತೊಕ್ಕೊಟ್ಟಿನ ವಾಚ್‌ಮನ್ ಶುಕ್ರವಾರ ದಿಢೀರ್ ನಾಪತ್ತೆ!

    ತೊಕ್ಕೊಟ್ಟು ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಕೋಯಿಕ್ಕೋಡ್ ನಿವಾಸಿ ಮೊಯ್ದಿನ್ ಕುಟ್ಟಿಯ ಸುಳಿವಿಲ್ಲ. ಏ.4ರಂದು ಪ್ರಕಟವಾಗಿದ್ದ ಕೇರಳ ಲಾಟರಿ ಫಲಿತಾಂಶದಲ್ಲಿ ಬಂಪರ್ ಬಹುಮಾನ ಪಡೆದಿರುವ ಐವರ ಪೈಕಿ ತಾನೂ ಒಬ್ಬ. ಕೋಟಿ ರೂ. ಮೊತ್ತದ ಬಹುಮಾನ ಬರಲಿದೆ ಎಂದು ಗುರುವಾರ ಸಾರ್ವಜನಿಕವಾಗಿ ಪ್ರಚಾರ ಮಾಡಿಕೊಂಡಿದ್ದ.

    ಸ್ಥಳೀಯ ಟೈಲರೊಬ್ಬರಿಂದ ಐನೂರು ರೂ. ಸಾಲ ಪಡೆದು ಲಾಟರಿ ಖರೀದಿಸಿದ್ದೆ. ಅದಕ್ಕೆ ಅದೃಷ್ಟ ಒಲಿದಿದೆ. ಕೋಟಿ ರೂ. ಬಹುಮಾನ ಬಂದಿದೆ’ ಎಂದು ಎಲ್ಲರನ್ನೂ ನಂಬಿಸಿದ್ದ. ಬಹುಮಾನದ ಲಾಟರಿ ಟಿಕೆಟ್ ನಕಲಿ ಪ್ರತಿಯನ್ನೂ ಪ್ರದರ್ಶಿಸಿದ್ದ. ಇದನ್ನು ನಂಬಿದ್ದ ಟೈಲರ್, ಮಾಧ್ಯಮದವರಿಗೆ ಮಾಹಿತಿ ನೀಡಿ, ‘ಲಾಟರಿ ವೀರ’ನೊಂದಿಗೆ ಫೋಟೋ ತೆಗೆಸಿಕೊಂಡಿದ್ದ್ದರು. ಖಚಿತಪಡಿಸಿಕೊಳ್ಳಲು ಸುದ್ದಿಗಾರರು ಕೇರಳ ಲಾಟರಿ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗಲೂ, ಸ್ಪಷ್ಟ ಮಾಹಿತಿ ಲಭಿಸಿರಲಿಲ್ಲ.
    ಇನ್ನೊಂದೆಡೆ, ಗುರುವಾರ ರಾತ್ರಿವರೆಗೂ ಲಾಟರಿ ವೀರ ಕೋಟಿ ಗೆದ್ದ ಕಥೆಯನ್ನೇ ಪುನರುಚ್ಚರಿಸುತ್ತಿದ್ದ. ಉಪ್ಪಳದಲ್ಲಿ ಲಾಟರಿ ಖರೀದಿಸಿದ್ದಾಗಿ ಆತ ಹೇಳಿಕೊಂಡಿದ್ದರೂ, ಆ ಭಾಗದ ಲಾಟರಿ ಮಾರಾಟಗಾರರು ಇದನ್ನು ಅಲ್ಲಗಳೆದಿದ್ದರು.

    ಮತ್ತಷ್ಟು ಮಂದಿ ಸಾಲ ಕೊಟ್ಟರು!: ವಾಚ್‌ಮೆನ್ ಆಗಿರುವ ಕುಟ್ಟಿ, ಸ್ಥಳೀಯವಾಗಿ ಪರಿಚಯ ಇರುವವರ ಬಳಿ ಸಾಕಷ್ಟು ಸಾಲ ಮಾಡಿದ್ದ. ಕೊಟ್ಟ ಸಾಲ ಹಿಂದಿರುಗಿಸುವಂತೆ ಸಾಲಗಾರರು ಕೇಳುತ್ತಲೇ ಇದ್ದರು. ಅವರನ್ನು ಖುಷಿಪಡಿಸಿ, ದಾರಿ ತಪ್ಪಿಸಲು ಮೊಯ್ದಿನ್ ಕುಟ್ಟಿಗೆ ಹೊಳೆದ ಉಪಾಯವೇ ಒಂದು ಕೋಟಿ ರೂ.ಬಹುಮಾನ! ಈತ ಲಾಟರಿ ಖರೀದಿಸಿದ್ದು ನಿಜ. ಆದರೆ ಬಹುಮಾನ ಬಂದಿರಲಿಲ್ಲ. ವಿಜೇತ ನಂಬರನ್ನು ಆನ್‌ಲೈನ್‌ನಲ್ಲಿ ನೀಡಿ, ಪ್ರಿಂಟ್‌ಔಟ್ ತೆಗೆದು ತನ್ನಲ್ಲಿದ್ದ ಲಾಟರಿಗೆ ಅಂಟಿಸಿ ಫೋಟೊ ಪ್ರಿಂಟ್ ಮಾಡಿಸಿ ಕೋಟಿ ರೂ. ಬಹುಮಾನ ಬಂದಿರುವುದಾಗಿ ಡಂಗುರ ಸಾರಿಸಿದ್ದ. ಲಾಟರಿಯ ಅಸಲಿ ಪ್ರತಿ ಏಜೆನ್ಸಿಗೆ ನೀಡಿದ್ದು, ಮೂರು ತಿಂಗಳೊಳಗೆ ಖಾತೆಗೆ ಹಣ ಬರುವುದಾಗಿ ನಂಬಿಸಿದ್ದ. ಇದರಿಂದ ಸಾಲ ಕೊಟ್ಟ ಟೈಲರ್ ಸಹಿತ ವ್ಯಾಪಾರಿಗಳು ಸಂಭ್ರಮಪಟ್ಟಿದ್ದರು. ಲಾಟರಿ ವೀರನ ಮಾತು ನಂಬಿದ ಇನ್ನಷ್ಟು ಮಂದಿ ಸಾಲ ನೀಡಿದರು. ಶುಕ್ರವಾರ ಬೆಳಗ್ಗೆ ಕಟ್ಟಡದಲ್ಲಿರುವವರಿಗೆ ಲಾಟರಿ ವಿಷಯ ಸುಳ್ಳೆಂದು ಗೊತ್ತಾಗಿ ವಿಚಾರಿಸಲು ತೆರಳಿದಾಗ ಕುಟ್ಟಿ ನಾಪತ್ತೆ.

    ದುಬೈಯಲ್ಲೂ ಕೋಟಿ ಸಿಕ್ಕಿತ್ತಂತೆ!: ಕೇರಳ ಲಾಟರಿಯಲ್ಲಿ ಒಂದು ಕೋಟಿ ರೂ.ಬಹುಮಾನ ಬಂತೆಂದು ನಂಬಿಸಿದ್ದ ಕುಟ್ಟಿ, ದುಬೈಯಲ್ಲೂ ಕೋಟಿ ದಿರ್ಹಂ ಲಾಟರಿ ಹೊಡೆದಿತ್ತೆಂದು ಇನ್ನೊಂದು ಕಟ್ಟುಕಥೆ ಹೇಳಿದ್ದ. 1988ರಲ್ಲಿ ದುಬೈಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಂದರ್ಭ ಅಲ್ಲಿ ಖರೀದಿಸಿದ್ದ ಲಾಟರಿಗೆ ಕೋಟಿ ದಿರ್ಹಂ ಬಂದಿತ್ತು. ಆಗ ಅದರ ಭಾರತದ ಮೌಲ್ಯ ಹತ್ತು ಕೋಟಿ ರೂ.ಆಗಿತ್ತು. ಆ ಹಣದಲ್ಲಿ ಕೇರಳದಲ್ಲಿ 60 ಸೆಂಟ್ಸ್ ಜಮೀನು ಖರೀದಿಸಿದೆ, ಮಗಳಿಗೆ ಮದುವೆ ಮಾಡಿದೆ, ಇಬ್ಬರು ಮಕ್ಕಳನ್ನು ವಿದೇಶಕ್ಕೆ ಕಳಿಸಿದೆ ಎಂದೆಲ್ಲ ಕುಟ್ಟಿ ಕಟ್ಟುಕಥೆ ಹೇಳಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts