More

    ಲೋಕಸಭೆ ಗೆಲ್ಲಲು ಹಿಂದುತ್ವದ ಜಪ!

    ಬೆಳಗಾವಿ: ರಾಜಕೀಯ ಕಾರಣಗಳಿಂದಾಗಿ ಅಯೊಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಗೈರಾಗಿದ್ದರೆ, ಇತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ಹಿಂದುತ್ವದ ಮಂತ್ರ ಪಠಿಸುತ್ತಿದ್ದಾರೆ. ಮತ್ತೊಂದೆಡೆ ಹಿಂದುತ್ವದ ಮೂಲಕ ಮರಾಠಿ ಭಾಷಿಕ ಮತದಾರರನ್ನು ಸೆಳೆಯಲು ಭಾವನಾತ್ಮಕ ವಿಷಯಗಳು ಮತ್ತೆ ಮುನ್ನೆಲೆಗೆ ಬಂದಿವೆ!

    ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಬೇಕು, ಯಾವುದು ಬರಬಾರದು ಎಂದು ನಿರ್ಣಾಯಕ ಪಾತ್ರ ವಹಿಸುವಷ್ಟು ರಾಜಕೀಯ ಶಕ್ತಿ ಹೊಂದಿರುವ ಬೆಳಗಾವಿಯಲ್ಲಿ ಮರಾಠಿ ಭಾಷಿಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ಭದ್ರಕೋಟೆ ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಹಿಂದುತ್ವ ಅಸ್ತ್ರದ ಪ್ರಯೋಗ ಆರಂಭಿಸಿದೆ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾನೆ ಕಾರ್ಯಕ್ರಮವನ್ನು ಸ್ಥಳೀಯ ಮಟ್ಟದಲ್ಲಿ ಆಚರಿಸಲು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಪರೋಕ್ಷವಾಗಿ ಆರ್ಥಿಕ ಸಹಾಯಧನ ಸೇರಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುತ್ತಿದೆ. ಅಲ್ಲದೆ, ಹಿಂದುತ್ವದ ಮೂಲಕ ಮರಾಠಿ ಭಾಷಿಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಹಿಂದುಪರ ಸಂಘಟನೆಗಳಲ್ಲಿನ ಕೆಲ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿರುವುದು ವಿಶೇಷ ಎನ್ನಲಾಗಿದೆ.

    ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕ ಮರಾಠಿ ಭಾಷಿಕ ಮತದಾರರು ಇದ್ದು, ಇವರೆಲ್ಲರೂ ಹಿಂದುತ್ವದ ಆಧಾರದ ಮೇಲೆ ದಶಕಗಳಿಂದ ಬಿಜೆಪಿ ಗೆಲ್ಲಿಸಿಕೊಂಡು ಬರುತ್ತಿದ್ದಾರೆ. ಆದರೆ, 2022ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಳಸಿದ ಹಿಂದುತ್ವ ಅಸ್ತ್ರ, ಗ್ಯಾರಂಟಿ ಯೋಜನೆಗಳ ಘೋಷಣೆ ಪರಿಣಾಮ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಅದೇ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಅಲ್ಲದೆ, ಇದಕ್ಕಾಗಿ 10 ವಿಧಾನಸಭಾ ಕ್ಷೇತ್ರಗಳಲ್ಲಿರುವ ಹಿಂದುಪರ ಸಂಘಟನೆಗಳು, ಮರಾಠಿ ಭಾಷಿಕರ ಮುಖಂಡರನ್ನು ಪಕ್ಷದ ರಾಜ್ಯಮಟ್ಟದ ನಾಯಕರು ನೇರವಾಗಿ ಸಂಪರ್ಕಿಸಿ ಗ್ರಾಮಗಳಲ್ಲಿನ ಹಳೆಯ ದೇವಸ್ಥಾನಗಳ ಅಭಿವೃದ್ಧಿ ಸೇರಿ ವಿವಿಧ ಭರವಸೆ ನೀಡುತ್ತಿರುವ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

    ಈಗಾಗಲೇ ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ, ಖಾನಾಪುರ, ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ, ಅಥಣಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಿ ಭಾಷಿಕರ ಮತದಾರರ ಪಟ್ಟಿಯನ್ನು ಗುರುತಿಸುವ ಕೆಲಸ ಆರಂಭಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರ, ಗೋವಾ ರಾಜ್ಯದಲ್ಲಿರುವ ಕಾಂಗ್ರೆಸ್ ನಾಯಕರ, ಮರಾಠಿ ಸಂಘಟನೆಗಳ ಮುಖಂಡರ ಮೂಲಕ ರಾಜ್ಯದಲ್ಲಿರುವ ಮರಾಠಿ ಭಾಷಿಕರನ್ನು ಸಂಪರ್ಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಮೃದು ಧೋರಣೆ ತಾಳುತ್ತಿದೆ. ಬಿಜೆಪಿ ಸೋಲಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲಿಸಲು ತಯಾರಿ ಆರಂಭಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಸಚಿವರಿಗೆ ಜವಾಬ್ದಾರಿ ಕೊಟ್ಟ ಕಾಂಗ್ರೆಸ್

    1990ರ ದಶಕದಲ್ಲಿ ಮೊದಲ ಜನತಾ ಪರಿವಾರ ಪ್ರಬಲವಾಗಿದ್ದ ಬೆಳಗಾವಿಯಲ್ಲಿ ನಂತರದಲ್ಲಿ ಕಾಂಗ್ರೆಸ್ ಶಕ್ತಿ ಮರೆಯಿತು. ಆದರೆ, ಬರುತ್ತ ಬಿಜೆಪಿ ಬಲಾಢ್ಯಗೊಂಡು ಕಾಂಗ್ರೆಸ್‌ಗೆ ಸಮನಾಗಿ ಓಡತೊಡಗಿದೆ. 2004ರಿಂದ 2018 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 18 ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರಕೋಟೆ ನಿರ್ಮಿಸಿಕೊಂಡಿತ್ತು. ಅಲ್ಲದೆ, ಎರಡು ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ವಶದಲ್ಲಿಟ್ಟುಕೊಂಡಿದೆ. ಆದರೆ, ರಾಜ್ಯದಲ್ಲಿ ಬದಲಾದ ರಾಜಕಾರಣ, ಸರ್ಕಾರ ಗ್ಯಾರಂಟಿ ಯೋಜನೆಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿವೆ. ಈ ಹಿನ್ನೆಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಜವಾಬ್ದಾರಿ ವಹಿಸಿದೆ. ಇದು ಬಿಜೆಪಿ ನಾಯಕರಿಗೆ ಚುನಾವಣೆ ಮುನ್ನವೇ ಬಿಸಿ ಮುಟ್ಟಿದೆ ಎನ್ನಲಾಗಿದೆ.

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts