More

    ಲಿಂಗಸುಗೂರು ಕ್ಷೇತ್ರದಲ್ಲಿ ಮೂರನೇ ಸ್ಥಾನದಿಂದ ಎದ್ದು ಬಂದ ವಜ್ಜಲ್

    ಅಮರೇಶಸ್ವಾಮಿ ಬಲ್ಲಟಗಿ ಲಿಂಗಸುಗೂರು

    ಎಸ್ಸಿ ಮೀಸಲು ಸ್ಥಳೀಯ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದರು.

    ಕಳೆದ ಎರಡು ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಬಾರಿ ಕೆಆರ್‌ಪಿಪಿ ಅಭ್ಯರ್ಥಿ ಸ್ಪರ್ಧೆಯಿಂದ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ, ಮತ ಎಣಿಕೆ ಆರಂಭದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟು ಕೊನೆಗೆ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆಲುವು ಸಾಧಿಸಿದ್ದಾರೆ.

    ಇದನ್ನೂ ಓದಿ: ಪೊಲೀಸ್ ಭದ್ರತೆಯಲ್ಲಿ ರವಾನೆ

    2008 ರಲ್ಲಿ ಬಿಜೆಪಿ, 2013 ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ವಜ್ಜಲ್ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಕಳೆದ ಬಾರಿ 47,385 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ವಜ್ಜಲ್ ಈ ಬಾರಿ 58,769 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ 10 ಸಾವಿರಕ್ಕೂ ಅಧಿಕ ಮತಗಳು ಬಿಜೆಪಿಗೆ ಲಾಭ ತಂದುಕೊಟ್ಟಿವೆ.

    ಕಳೆದ ಚುನಾವಣೆಯಲ್ಲಿ 54,230 ಮತ ಪಡೆದು ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿ ಈ ಬಾರಿ 55,960 ಮತ ಪಡೆದರೂ ಪರಾಭವಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿದ್ದು ವೈ.ಬಂಡಿ ಕಳೆದ ಬಾರಿ 49,284 ಪಡೆದು ದ್ವಿತೀಯ ಸ್ಥಾನ ಪಡೆದಿದ್ದರೆ, ಈ ಬಾರಿ 41,322 ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಸಿದ್ದು ಬಂಡಿ ಮತಗಳು ಬಿಜೆಪಿಗೆ ವರ್ಗವಾಗಿರುವಂತೆ ಕಂಡುಬರುತ್ತಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ರುದ್ರಯ್ಯ ಕೆಆರ್‌ಪಿಪಿಯಿಂದ ಸ್ಪರ್ಧಿಸಿ 13,764 ಮತ ಪಡೆದು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿದ್ದಾರೆ.

    ಆರ್.ರುದ್ರಯ್ಯ ಸ್ಪರ್ಧೆಯಿಂದಾಗಿ ದಲಿತರ ಮತಗಳು ವಿಭಜನೆಯಾಗಿವೆ. ಆರ್.ರುದ್ರಯ್ಯ ಜತೆಗೆ ಕೆಲ ಕಾಂಗ್ರೆಸ್ ಮುಖಂಡರು ಮತ್ತು ಪುರಸಭೆ ಸದಸ್ಯರು ಕೈಜೋಡಿಸಿದ್ದು ಹೂಲಗೇರಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಕ್ಕಿಂತ ಒಂದು ದಿನ ಮುಂಚೆ ಟಿಕೆಟ್ ಘೋಷಣೆ ಮಾಡಿದ್ದು ಕೂಡ ಕೈ ಪಾಳಯದ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ. ಎರಡು ಬಾರಿ ಸೋತಿದ್ದ ಸಿದ್ದ ಬಂಡಿಗೆ ಅನುಕಂಪ ಕೈಹಿಡಿಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts