More

    ಪಿಡಿಒಗಳ ಮೇಲೆ ನಿಗಾ ವಹಿಸಲು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಸೂಚನೆ

    ಲಿಂಗಸುಗೂರು: ಸರ್ಕಾರಗಳ ನಾನಾ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಪಿಡಿಒಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಜಿಲ್ಲಾಡಳಿತ ಪಿಡಿಒಗಳ ಮೇಲೆ ನಿಗಾ ವಹಿಸಬೇಕೆಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.

    ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಾನಾ ಯೋಜನೆಗಳ ಮೂಲಕ ಕೋಟ್ಯಂತರ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಆಯಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ಶೌಚಗೃಹ, ವಸತಿ, ಉದ್ಯೋಗ ಖಾತ್ರಿ ಹಾಗೂ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಿಡಿಒಗಳು ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಅನುದಾನ ದುರ್ಬಳಕೆಯಾಗುವುದರ ಜತೆಗೆ ಅಭಿವೃದ್ಧಿಗೆ ಮಾರಕವಾಗಲಿದೆ ಎಂದರು.

    ರೈತರ ಅನುಕೂಲಕ್ಕಾಗಿ ಗಂಗಾ ಕಲ್ಯಾಣ ಯೋಜನೆಗೆ ಒತ್ತು ನೀಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು. ಕೆಲ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ಶವಗಳ ಅಂತ್ಯಕ್ರಿಯೆಗೆ ಪರದಾಡುವಂತಾಗಿದೆ. ಕೂಡಲೇ ಅಗತ್ಯವಿರುವೆಡೆ ಸ್ಮಶಾನ ಜಾಗ ನೀಡಬೇಕೆಂದು ಒತ್ತಾಯಿಸಿದರು. ನಾನಾ ಇಲಾಖೆಗಳಿಗೆ ಸಂಬಂಧಿಸಿದ 54 ಅಹವಾಲು ಸಲ್ಲಿಕೆಯಾದವು. ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಅವಿನಾಶ ಮೆನನ್ ಅರ್ಜಿದಾರರನ್ನು ವೇದಿಕೆ ಬಳಿ ಕರೆಯಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಪರಿಹಾರ ದೊರಕಿಸಿಕೊಡುವಂತೆ ತಾಕೀತು ಮಾಡಿದರು.

    2009ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಚಿಕ್ಕಉಪ್ಪೇರಿ ಗ್ರಾಮ ಸ್ಥಳಾಂತರಿಸಿ ಆಸರೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಆದರೆ 135 ಜನ ಸಂತ್ರಸ್ತರಿಗೆ ಇದುವರೆಗೂ ಹಕ್ಕುಪತ್ರ ವಿತರಿಸಿಲ್ಲ. ಜಿಲ್ಲಾಡಳಿತ ಕೂಡಲೇ ಹಕ್ಕುಪತ್ರ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಸಂತ್ರಸ್ತರು ಮನವಿ ಮಾಡಿದರು. ಯರಗುಂಟಿ ಗ್ರಾಮದ ಕೆಲ ಓಣಿಗಳಲ್ಲಿ ಸಿಸಿ ರಸ್ತೆ, ಚರಂಡಿ ಇಲ್ಲದೆ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಮೂಲ ಸೌಕರ್ಯ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಎಸ್ಪಿ ನಿಖಿಲ್, ಎಡಿಸಿ ದುರಗೇಶ, ಗ್ರಾಪಂ ಅಧ್ಯಕ್ಷೆ ಶೇಖಮ್ಮ ವೆಂಕನಗೌಡ ಪಾಟೀಲ್, ತಹಸೀಲ್ದಾರ್ ಬಲರಾಮ್ ಕಟ್ಟಿಮನಿ, ತಾಪಂ ಇಒ ಲಕ್ಷ್ಮೀದೇವಿ, ಬಿಇಒ ಹುಂಬಣ್ಣ ರಾಠೋಡ್ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts