ಲಿಂಗಸುಗೂರು: ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಶುದ್ಧ ಕುಡಿವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಅಂತಹ ಘಟಕಗಳನ್ನು ದುರಸ್ತಿಗೊಳಿಸಲು ಕ್ರಮ ವಹಿಸಬೇಕೆಂದು ಪಿಡಿಒಗಳಿಗೆ ಎಸಿ ಅವಿನಾಶ ಶಿಂಧೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿನ 22 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲವೆಂಬ ಮಾಹಿತಿ ಇದೆ. ಬೇಸಿಗೆ ಸಮಯದಲ್ಲಿ ಈ ಬಗ್ಗೆ ನಿರ್ಲಕ್ಷೃ ವಹಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಗಿತಗೊಂಡಿರುವ ಘಟಕಗಳ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿರದಿದ್ದರೆ ಬೇರೆಯವರಿಗೆ ಗುತ್ತಿಗೆ ನೀಡಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಕಲ್ಪಿಸಬೇಕು. ಮಾಹಿತಿ ನೀಡದೆ ಸಭೆಗೆ ಗೈರಾದ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಪಿಡಿಒ, ಸೆಕ್ಷನ್ ಆಫೀಸರ್, ಗ್ರಾಮ ಆಡಳಿತಾಧಿಕಾರಿ ಜಂಟಿ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆಯಂತೆ ಕಾಮಗಾರಿಗಳು ಯಾವ ಸ್ಥಿತಿಯಲ್ಲಿವೆ ಎಂಬ ಬಗ್ಗೆ ಭಾವಚಿತ್ರ ಸಮೇತ ಮಂಗಳವಾರದೊಳಗೆ ವರದಿ ನೀಡುವಂತೆ ಸಹಾಯಕ ಆಯುಕ್ತ ತಾಕೀತು ಮಾಡಿದರು.
ಗುರುಗುಂಟಾದ ಹಾಲಬಾವಿ ಓಣಿಯಲ್ಲಿ ಹೊಸದಾಗಿ ಕೊರೆದಿರುವ ಬೋರ್‌ವೆಲ್‌ಗೆ ಮೋಟಾರ್ ಪಂಪ್‌ಸೆಟ್, ಪೈಪ್‌ಲೈನ್ ಅಳವಡಿಕೆ ಮಾಡಬೇಕು ಪಿಡಿಒ ಗೌರಮ್ಮ ಹೇಳಿದರು. ಗ್ರಾಪಂಗಳಿಗೆ ಭೇಟಿ ನೀಡಿ ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಕುಮಾರಖೇಡ ಗ್ರಾಮದಲ್ಲಿ ಕೊಳವೆಬಾವಿ ಕೊರೆಯಿಸುವಂತೆ ಇಂಜಿನಿಯರ್‌ಗಳಿಗೆ ತಾಪಂ ಇಒ ಅಮರೇಶ ಯಾದವ್ ಸೂಚಿಸಿದರು.