More

    ಲಿಫ್ಟ್ ನೀರಾವರಿ ಯೋಜನೆಗಳಿಗೆ ಗ್ರಹಣ

    ಬೆಳಗಾವಿ : ಬರ ಪೀಡಿತ, ಮಳೆಯಾಶ್ರಿತ ಪ್ರದೇಶದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಜಿಲ್ಲೆಯ ರೈತರ ಜಮೀನಿಗೆ ನೀರುಣಿಸಲು ಅನುಷ್ಠಾನಕ್ಕೆ ಉದ್ದೇಶಿಸಿರುವ ‘ಲಿಫ್ಟ್ ನೀರಾವರಿ’ ಯೋಜನೆಗಳಿಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ದಶಕಗಳಿಂದ ಯೋಜನೆಗಳು ಭೂಸ್ವಾಧೀನ ಸಮೀಕ್ಷೆ ಹಂತದಲ್ಲಿಯೇ ಉಳಿದಿವೆ.

    ಅನುಮೋದನೆಗೆ ಕಾಯುತ್ತಿವೆ ಪ್ಲಾನ್: ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ವ್ಯಾಪ್ತಿಯಲ್ಲಿ ಮಧ್ಯಮ ಹಾಗೂ ಬೃಹತ್ ನೀರಾವರಿ ಯೋಜನೆಗಳು ಆಡಳಿತಾತ್ಮಕ ಅನುಮೋದನೆ ಮತ್ತು ಭೂ ಸ್ವಾಧೀನಕ್ಕೆ ಬರೋಬ್ಬರಿ 20 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. 2010 ರಿಂದ ಈಚೆಗೆ ಕೈಗೊಂಡ 20ಕ್ಕೂ ಅಧಿಕ ಲಿಫ್ಟ್ ನೀರಾವರಿ ಯೋಜನೆಗಳು ಆಡಳಿತಾತ್ಮಕ ಅನುಮೋದನೆಗಾಗಿ ಕಾಯುತ್ತಿವೆ. ಇನ್ನೂ ಕೆಲ ಯೋಜನೆಗಳು ವರ್ಷಗಳಿಂದ ಸಮೀಕ್ಷೆ ಹಂತದಲ್ಲಿಯೇ ಉಳಿದುಕೊಂಡಿವೆ. ಸರ್ಕಾರದ ಮಟ್ಟದಲ್ಲಿರುವ ಈ ನೀರಾವರಿ ಯೋಜನೆಗಳು ಅಧಿಕೃತಕವಾಗಿ ಪ್ರಾರಂಭವಾದರೆ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆ ವ್ಯಾಪ್ತಿಯ 5,17,754 ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದೆ. ಇದರಿಂದ ಈ ಭಾಗದ ಲಕ್ಷಾಂತರ ರೈತರ ದಶಕಗಳ ಕನಸು ನನಸಾಗಲಿದೆ. ಆದರೆ, ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳಿಂದಾಗಿ ಲಿಫ್ಟ್ ನೀರಾವರಿ ಯೋಜನೆಗಳ ಸಮೀಕ್ಷೆ ಕೆಲಸ ಪೂರ್ಣಗೊಂಡಿಲ್ಲ. ಈ ನೀರಾವರಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಒಟ್ಟಿನಲ್ಲಿ ಒಂದು ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಕನಿಷ್ಠ 1.5 ರಿಂದ 3 ವರ್ಷ ಕಾಯಬೇಕು. ಕಾಲುವೆಗಳನ್ನು ನಿರ್ಮಿಸಿ, ನೀರು ಹರಿಸುವ ವೇಳೆಗೆ ಬರೋಬ್ಬರಿ 8 ವರ್ಷ ಬೇಕಾಗುತ್ತದೆ.

    ಸಿಗಬಹುದೇ ವೇಗ?: 2021-22ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ ಹೊಸ ಯೋಜನೆಗಳ ಜತೆಗೆ ವಿವಿಧ ಹಂತದಲ್ಲಿರುವ ಹಳೆ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆಯಿದೆ. ಅಲ್ಲದೆ ಉತ್ತರ ಕರ್ನಾಟಕ ಭಾಗದವರಾದ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವರೂ ಆಗಿರುವುದರಿಂದ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯ ವ್ಯಾಪ್ತಿಯ ಹಳೇ ನೀರಾವರಿ ಯೋಜನೆಗಳಿಗೆ ವೇಗ ಸಿಗಬಹುದು. ಅಲ್ಲದೆ, ಪ್ರಗತಿ ಹಂತದಲ್ಲಿರುವ ಲಿಫ್ಟ್ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬರುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳು ತಿಳಿಸಿದ್ದಾರೆ.

    ನೀರು ಬಳಕೆಗೆ ಕಾಲುವೆಗಳಿಲ್ಲ

    ಘಟಪ್ರಭಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ 51 ಟಿಎಂಸಿ ನೀರು ಶೇಖರಣೆ ಮಾಡಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ 3,08,326 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಮಹತ್ತರ ಉದ್ದೇಶವಾಗಿತ್ತು. 1975ರಲ್ಲಿ ಬಾರಿ ವೇಗದೊಂದಿಗೆ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಆದರೆ, ಸರ್ಕಾರದ ನಿರ್ಲಕ್ಷೃ, ರಾಜಕೀಯ ಹಿತಾಸಕ್ತಿ ಮತ್ತಿತರ ಕಾರಣಗಳಿಂದ ಯೋಜನೆಯ ವೆಚ್ಚ ಮರು ಪರಿಷ್ಕೃತಗೊಂಡು 2185.616 ಕೋಟಿ (23 ಪಟ್ಟು) ಹೆಚ್ಚುತ್ತಲೇ ಬಂದಿದೆಯೇ ಹೊರತು, ಕಾಮಗಾರಿ ಪೂರ್ಣಗೊಂ ಡಿಲ್ಲ. ಜಲಾಶಯದಲ್ಲಿ 51 ಟಿಎಂಸಿ ನೀರು ಶೇಖರಣೆಯಾಗಿದೆ. ಆದರೆ, ಆ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಕಾಲುವೆಗಳು ಇಲ್ಲ ಎಂದು ರೈತರು ದೂರಿದ್ದಾರೆ.

    ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಮತ್ತು ಆರಂಭದ ಹಂತದಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗಲಿದೆ.
    | ರಮೇಶ ಜಾರಕಿಹೊಳಿ, ಜಲ ಸಂಪನ್ಮೂಲ ಸಚಿವ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts