More

    ಸಹಜ ಸ್ಥಿತಿಗೆ ಜನಜೀವನ; ಸುರಕ್ಷಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು…

    ಕಳೆದ ಹನ್ನೊಂದು ತಿಂಗಳಿಂದ ಕರ್ನಾಟಕ ಸೇರಿ ಇಡೀ ದೇಶ ಕರೊನಾ ಸಂಕಷ್ಟದ ಹಲವು ಮುಖಗಳನ್ನು ಕಂಡಿದೆ. ಲಾಕ್​ಡೌನ್, ಉದ್ಯೋಗನಷ್ಟ, ಆರ್ಥಿಕತೆಗೆ ಹಾನಿ ಹೀಗೆ ಹಲವು ಅನಿರೀಕ್ಷಿತ ಘಟನೆಗಳು ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದವು. ಈ ಸೋಂಕಿನ ಹಾವಳಿ ಒಂದೆರಡು ತಿಂಗಳಲ್ಲಿ ನಿಯಂತ್ರಣಕ್ಕೆ ಬಂದುಬಿಡಬಹುದು ಎಂದೇ ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ದಿನಗಳೆದಂತೆ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಲಾಕ್​ಡೌನ್ ಮುಂದುವರಿದಿದ್ದು ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿತು. ಕರೊನಾಪೂರ್ವದ ಸ್ಥಿತಿಗೆ ನಮ್ಮ ಜೀವನ ಮತ್ತೆ ತಲುಪುವುದೇ ಎಂದು ಬಹುತೇಕರು ಪ್ರಶ್ನಿಸಿಕೊಳ್ಳುವಂತಾಯಿತು. ಶಾಲೆಗಳು ಮುಚ್ಚಿದ ಕಾರಣ ಮಕ್ಕಳಂತೂ ಹನ್ನೊಂದು ತಿಂಗಳು ಮನೆಯಲ್ಲೇ ಉಳಿಯುವಂತಾಯಿತು. ಈ ಅವಧಿಯಲ್ಲಿ ಒಂಟಿತನದಿಂದ ಖಿನ್ನತೆ, ಇತರ ಅನಾರೋಗ್ಯ ಸಮಸ್ಯೆಗಳನ್ನೂ ಎದುರಿಸಬೇಕಾಯಿತು.

    ಕಟ್ಟುನಿಟ್ಟಿನ ಲಾಕ್​ಡೌನ್ ಘೋಷಣೆಯಾದಾಗ ಎಷ್ಟೋ ಜನ ಆ ಬಗ್ಗೆ ಅಪಸ್ವರ ಎತ್ತಿದರು. ಆದರೆ, ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳ ಸ್ಥಿತಿಯನ್ನು ಗಮನಿಸಿದಾಗ ಭಾರತ ಕರೊನಾ ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿ ಗೆಲುವು ದಾಖಲಿಸಿದೆ. ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ತಗ್ಗುತ್ತಿದೆ. ಲಸಿಕೆಯೂ ಬಂದಿದ್ದು, ಈಗಾಗಲೇ ಆರೋಗ್ಯ ಕ್ಷೇತ್ರದ 37 ಲಕ್ಷಕ್ಕೂ ಅಧಿಕ ಜನ ಲಸಿಕೆ ಪಡೆದುಕೊಂಡಿದ್ದಾರೆ. ಹಲವು ವಲಯಗಳು ಈಗಾಗಲೇ ಚೇತರಿಕೆಯ ಹಂತದಲ್ಲಿವೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಇಂದಿನಿಂದ (ಸೋಮವಾರ) ಸಿನಿಮಾ ಹಾಲ್​ಗಳು ಪೂರ್ಣಪ್ರಮಾಣದಲ್ಲಿ ತೆರೆದುಕೊಳ್ಳಲಿವೆ. ಈವರೆಗೆ ಶೇಕಡ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿತ್ತು. ಈಗ ಈ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಮನರಂಜನಾ ಕ್ಷೇತ್ರದ ಪಾಲಿಗೆ ಇದು ಶುಭಸುದ್ದಿ. ಮತ್ತೊಂದು ಮಹತ್ವದ ಬೆಳವಣಿಗೆ ಶಾಲೆಗಳ ಪುನರಾರಂಭ. ಇಂದಿನಿಂದ ಶಾಲೆಗಳು ತೆರೆಯಲಿದ್ದು, 9 ರಿಂದ 12ನೇ ತರಗತಿಗಳಿಗೆ ಪಾಠ ಆರಂಭವಾಗಲಿದೆ. ಇದಕ್ಕೆ ಬೇಕಾದ ಪೂರಕ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ. 6ರಿಂದ 8ನೇ ತರಗತಿ ಮಕ್ಕಳಿಗೆ ವಿದ್ಯಾಗಮ ದಿನ ಬಿಟ್ಟು ದಿನ ಮುಂದುವರಿಯಲಿದೆ. ನೇರ ಮತ್ತು ಆನ್​ಲೈನ್ ತರಗತಿಗಳೆರಡಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಹಾಜರಿ ಕಡ್ಡಾಯವಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇತರ ರಾಜ್ಯಗಳಲ್ಲೂ ಹಂತ-ಹಂತವಾಗಿ ಶಾಲೆಗಳನ್ನು ತೆರೆಯಲಾಗುತ್ತಿದೆ.

    ಈ ಬೆಳವಣಿಗೆಗಳು ಆಶಾವಾದ ಮೂಡಿಸಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿರುವುದು ಸಮಾಧಾನಕರ ಬೆಳವಣಿಗೆ. ಆದರೆ, ರೂಪಾಂತರಿ ಅಲೆಯ ಆತಂಕ ಇದೆ. ಜತೆಗೆ, ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿದರೆ ಸೋಂಕು ಪ್ರಸರಣ ಮತ್ತೆ ವೇಗ ಪಡೆಯಬಹುದು, ಹಾಗಾದರೆ ಆ ಸ್ಥಿತಿಯನ್ನು ನಿಯಂತ್ರಿಸುವುದು ಮತ್ತಷ್ಟು ಕಷ್ಟವಾಗುತ್ತದೆ ಎಂಬುದು ವೈದ್ಯರ ಮತ್ತು ಆರೋಗ್ಯ ಕ್ಷೇತ್ರದ ತಜ್ಞರ ಅಭಿಪ್ರಾಯ. ಹಾಗಾಗಿ, ವೈಯಕ್ತಿಕ ಅಂತರ ಕಾಪಾಡಿಕೊಳ್ಳುವುದು, ಮುಖಗವಸು ಬಳಕೆ, ಸ್ವಚ್ಛತೆಗೆ ಆದ್ಯತೆ ಸೇರಿ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಣ್ಣ ನಿರ್ಲಕ್ಷ್ಯಕ್ಕೂ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

    ಓದುಗರ ಗಮನಕ್ಕೆ: ಜನವರಿ 31ರಂದು ಪ್ರಕಟವಾದ ‘ಕಾವ್ಯಲೋಕದ ಧ್ರುವತಾರೆ’ ಲೇಖನದಲ್ಲಿ ದ.ರಾ.ಬೇಂದ್ರೆ ಜನಿಸಿದ್ದು 31-01-1986ರಲ್ಲಿ ಎಂದು ಕಣ್ತಪ್ಪಿನಿಂದ ಪ್ರಕಟವಾಗಿದೆ. ಬೇಂದ್ರೆ ಜನಿಸಿದ್ದು 31-01-1896ರಂದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts