ಸಿರವಾರ: ನೂತನ ದಂಪತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇನ್ನೊಬ್ಬರಿಗೆ ಮಾದರಿಯಾಗುವಂತೆ ಜೀವನ ಸಾಗಿಸಬೇಕು ಎಂದು ರಾಯಚೂರು ಮತ್ತು ಅತ್ತನೂರಿನ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅತ್ತನೂರಿನಲ್ಲಿ ರಾಚೋಟಿವೀರ ಶಿವಾಚಾರ್ಯ ಸ್ವಾಮಿಗಳ 20ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಹೆಣ್ಣು ಮನೆ ಬೆಳಗುವ ಜ್ಯೋತಿಯಾಗಬೇಕೇ ಹೊರತು ಮನೆಗೆ ಬೆಂಕಿ ಹಚ್ಚುವ ಹಣತೆಯಾಗಬಾರದು. ಅತ್ತೆ ಸೊಸೆಯನ್ನು ಮಗಳಂತೆ ಕಾಣಬೇಕು. ಸೊಸೆ ಕೂಡಾ ಅತ್ತೆಯನ್ನು ಸ್ವಂತ ತಾಯಿಯಂತೆ ಕಾಣಬೇಕು ಎಂದು ತಿಳಿಸಿದರು.
ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದರು. 10 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. 10 ದಿನ ನಡೆದ ನವಲಗುಂದ ಅಜಾತಶ್ರೀ ನಾಗಲಿಂಗ ಶಿವಯೋಗಿಗಳ ಪುರಾಣ ಪ್ರವಚನದ ಮಹಾ ಮಂಗಲವಾಯಿತು.
ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಕಲ್ಮಠದ ಪಂಡಿತಾರಾಧ್ಯ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಜಾಗಟಗಲ್ ಬೆಟ್ಟದಯ್ಯಪ್ಪ ತಾತ, ವೇದಮೂರ್ತಿ ರಾಚಯಪ್ಪ ತಾತ, ನಿಲೋಗಲ್ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಸುಲ್ತಾನಪುರ ಶಂಭು ಸೋಮನಾಥ ಶ್ರೀಗಳು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ, ಜಿಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್, ದಿಡ್ಡಿ ಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಸವಲಿಂಗಯ್ಯ ಸ್ವಾಮಿ, ದೇವಸ್ಥಾನ ಸಮಿತಿ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ, ಕಾರ್ಯದರ್ಶಿ ನವೀನ್ ಪಾಟೀಲ್ ಇತರರಿದ್ದರು.