More

    ಕುಸ್ತಿ ಪರಂಪರೆ ಉಳಿಸಲಿ

    ಪೈಲ್ವಾನರನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಸರ್ಕಾರ ಮುಂದಾಗಲಿ

    ಅವಿನಾಶ್ ಜೈನಹಳ್ಳಿ ಮೈಸೂರು
    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ನಾಡಿನ ಗಂಡು ಕಲೆ ನಾಡಕುಸ್ತಿ ಪಂದ್ಯಾವಳಿಯನ್ನು ಎಂದಿನಂತೆ ಆಯೋಜಿಸುವ ಮೂಲಕ ಪೈಲ್ವಾನರನ್ನು ಪ್ರೋತ್ಸಾಹಿಸಿ, ಕುಸ್ತಿ ಪರಂಪರೆ ಉಳಿಸಿ ಬೆಳೆಸಲು ಸರ್ಕಾರ ಮುಂದಾಗಬೇಕು ಎಂಬ ಕೂಗು ಕೇಳಿಬರುತ್ತಿದೆ.


    ಮೈಸೂರು ದಸರಾಗೂ, ಕುಸ್ತಿಗೂ ಅವಿನಾಭಾವ ಸಂಬಂಧ. ದಸರಾ ಬಂತೆಂದರೆ ಕುಸ್ತಿಪಟುಗಳಿಗೆ ಏನೋ ಸಂಭ್ರಮ. ದೇಶದ ಮೂಲೆ ಮೂಲೆಗಳಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುವ ಪೈಲ್ವಾನರಿಗೆ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಹಣಾಹಣಿ ನಡೆಸುವುದೇ ಪ್ರತಿಷ್ಠೆಯ ವಿಷಯ. ಆದರೆ, ಮಹಾಮಾರಿ ಕರೊನಾ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವನ್ನು ಎರಡು ವರ್ಷಗಳ ಕಾಲ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಕುಸ್ತಿ ಪಂದ್ಯಾವಳಿ ಆಯೋಜಿಸದೆ ಕುಸ್ತಿಪಟುಗಳು ಹಾಗೂ ಕುಸ್ತಿ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.


    ದಸರಾ ಮಹೋತ್ಸವ ಬಂತೆಂದರೆ ಸಾಕು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕುಸ್ತಪಟುಗಳು ಕೂಡ ದಸರೆ ಅಖಾಡದ ಮಟ್ಟಿ ಮೇಲೆ ಪಟ್ಟು ಹಾಕಲು ಹಾತೊರೆಯುತ್ತಾರೆ. ಇನ್ನು ತಮಗೂ ಕುಸ್ತಿ ಮಾಡಲು ಅವಕಾಶ ಸಿಕ್ಕರೆ ಸಾಕೆಂದು ನೂರಾರು ಸ್ಥಳೀಯ ಪೈಲ್ವಾನರು ಚಡಪಡಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ತಮಗೆ ಇಷ್ಟವಾದ ನಾಡಕುಸ್ತಿ, ಪಾಯಿಂಟ್ ಕುಸ್ತಿ, ದೊಡ್ಡಕುಸ್ತಿ, ಮಾರ್ಫಿಟ್ ಕುಸ್ತಿಯ ಗಮ್ಮತ್ತು ಸವಿಯಲು ಕುಸ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ, ಎರಡು ವರ್ಷದಿಂದ ಸರಳ ಆಚರಣೆಯಿಂದಾಗಿ ನಾಡಿನ ಗಂಡುಕಲೆ ಕುಸ್ತಿಯ ವೈಭವ ಕುಂದಿತ್ತು. ಈಗ ಎರಡು ವರ್ಷಗಳ ಬಳಿಕ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸುವ ಸಾಧ್ಯತೆಗಳಿದ್ದು, ನಾಡಹಬ್ಬಕ್ಕೆ ಸಾಂಸ್ಕೃತಿಕ ನಗರಿ ಸದ್ದಿಲ್ಲದೆ ಸಜ್ಜಾಗುತ್ತಿದೆ. ಕರೊನಾ ಸೋಂಕಿನಿಂದ ಎರಡು ವರ್ಷಗಳಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಚಿಂತಿಸಿದೆ.


    ಹಾಗಾಗಿ, ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಎಂದಿನಂತೆ ಆಯೋಜಿಸುವ ನಿಟ್ಟಿನಲ್ಲಿ ಚರ್ಚೆಗಳಾಗಬೇಕೆಂಬ ಕೂಗು ಪೈಲ್ವಾನರು ಮತ್ತು ಉಸ್ತಾದ್‌ಗಳ ವಲಯದಲ್ಲಿ ಜೋರಾಗಿದೆ. ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಲೇಬೇಕೆಂದು ವರ್ಷದಿಂದ ಗರಡಿಯಲ್ಲಿ ನೂರಾರು ಪೈಲ್ವಾನರು ಕಸರತ್ತು ನಡೆಸುತ್ತಿದ್ದಾರೆ.


    ಎರಡು ವರ್ಷದಿಂದ ನಿರಾಸೆ:
    ದಸರಾ ಸಂದರ್ಭದಲ್ಲಿ ಒಂದು ವಾರ ಕಾಲ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪರಂಪರೆ ವಿಜೃಂಭಿಸುತಿತ್ತು. ನಿರೀಕ್ಷಿಸಿದ್ದ ಹುರಿಯಾಳುಗಳನ್ನು ನಿರೀಕ್ಷೆಗೂ ಮೀರಿ ಸೇರುತ್ತಿದ್ದ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು. ನಾಡಕುಸ್ತಿ, ಮಾರ್ಫಿಟ್ ಕುಸ್ತಿ, ಪಾಯಿಂಟ್ ಕುಸ್ತಿಗಳು ನಡೆಯುತ್ತಿದ್ದವು. ಮುಖ್ಯವಾಗಿ ಪುರುಷರಿಗೆ ‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’, ‘ದರಸಾ ಕೇಸರಿ’ ಹಾಗೂ ಮಹಿಳೆಯರಿಗೆ ‘ದಸರಾ ಕಿಶೋರಿ’ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಹೀಗಾಗಿ, ಕುಸ್ತಿಗಳು ದಸರಾ ಮಹೋತ್ಸವದ ಪ್ರತಿಷ್ಠೆಯ ಕಣವಾಗಿದ್ದವು.


    ನಾಡಕುಸ್ತಿಯ ಜತೆಗೆ, ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಪುರುಷರ ಗ್ರೀಕೋ ರೋಮನ್ ಕುಸ್ತಿ, ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ, ಪುರುಷರ ಫ್ರೀಸ್ಟೈಲ್ ಕುಸ್ತಿಗಳು ಆಕರ್ಷಿಸುತ್ತಿದ್ದವು. ಈ ಪೈಕಿ ಹೆಚ್ಚಾಗಿ ನಾಡಕುಸ್ತಿ ಹಾಗೂ ಮಾರ್ಫಿಟ್ ಕುಸ್ತಿಗಳನ್ನು ನೋಡಲು ಕ್ರೀಡಾಂಗಣದಲ್ಲಿ ಹೆಚ್ಚು ಕುಸ್ತಿ ಅಭಿಮಾನಿಗಳು ಸೇರುತ್ತಿದ್ದರು.


    ಮಟ್ಟಿ ಮೇಲೆ ಜಟ್ಟಿತನ ಮೆರೆಯುತ್ತಿದ್ದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹ ನೀಡುತ್ತಿದ್ದರು. ಬಗೆ ಬಗೆಯ ಹೂಗಳಿಂದ ಅಲಂಕಾರಗೊಂಡ ಮಟ್ಟಿಯ ಮೇಲೆ ಹುಬ್ಬೇರಿದ ಪೈಲ್ವಾನರು ವಿಭಿನ್ನ ಪಟ್ಟು ಪ್ರದರ್ಶಿಸುತ್ತಿದ್ದರು. ಮಟ್ಟಿ ಮೇಲೆ ಮದಗಜಗಳ ರೀತಿ ಪೈಲ್ವಾನರು ಸೆಣಸುತ್ತಿದ್ದರೆ, ಕಿಕ್ಕಿರಿದು ಸೇರುತ್ತಿದ್ದ ಕುಸ್ತಿ ಪ್ರೇಮಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಆದರೆ, ಎರಡು ವರ್ಷಗಳ ಕಾಲ ಕುಸ್ತಿಪಟುಗಳು ಹಾಗೂ ಕುಸ್ತಿ ಅಭಿಮಾನಿಗಳು ನಿರಾಸೆಗೆ ಒಳಗಾಗಿದ್ದಾರೆ. ಆದ್ದರಿಂದ ಈ ಬಾರಿ ಎಂದಿನಂತೆ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಬೇಕು ಎನ್ನುವ ಒತ್ತಾಯ ಜೋರಾಗಿದೆ.


    ರಾಜರ ಕಾಲದಲ್ಲಿ ಎಲ್ಲ ಕುಸ್ತಿಗಳಿಗೂ ಅರಮನೆ ಮುಂದೆಯೇ ಅಖಾಡ ನಿರ್ಮಾಣವಾಗುತ್ತಿತ್ತು. ಸ್ವತಃ ಮಹಾರಾಜರೇ ಕುಸ್ತಿ ನೋಡಲು ಕೂರುತ್ತಿದ್ದರು. ರಾಷ್ಟ್ರದ ನಾನಾ ಭಾಗದಿಂದ ಆಗಮಿಸುತ್ತಿದ್ದ ಪೈಲ್ವಾನರು ಮತ್ತು ಆಸ್ಥಾನದ ಕುಸ್ತಿಪಟುಗಳು ಸೆಣಸುತ್ತಿದ್ದರು. ಕುಸ್ತಿ ಕಾಳಗದಲ್ಲಿ ಗೆದ್ದವರಿಗೆ ಯೋಗ್ಯಾನುಸಾರ ಬಹುಮಾನ ನೀಡುತ್ತಿದ್ದರು.
    ವಿಜಯದಶಮಿಯಂದು ನಡೆಯುತ್ತಿದ್ದ ಕುಸ್ತಿ ವೀಕ್ಷಿಸಲು ದೇಶ ವಿದೇಶಗಳಿಂದಲೂ ಪ್ರೇಕ್ಷಕರು ಬರುತ್ತಿದ್ದರು. ಅತ್ಯಂತ ತುರುಸಿನ ಕುಸ್ತಿ ಪಂದ್ಯಗಳು ನಡೆಯುತ್ತಿದ್ದವು. ಅಂತ್ಯದಲ್ಲಿ ಗೆದ್ದವರಿಗೆ ಮತ್ತು ಸೋತವರಿಗೂ ಸಮಾನ ಗೌರವ ಸಿಗುತ್ತಿತ್ತು. ಇದೆಲ್ಲದರ ಪರಿಣಾಮವಾಗಿ ಇಲ್ಲಿಯ ಜನರಲ್ಲಿ ಕುಸ್ತಿ ಪ್ರೀತಿಯು ಗಟ್ಟಿಯಾಗಿ ಉಳಿಯಿತು. ಹಾಗಾಗಿ ದಸರೆ ಕುಸ್ತಿಗೆ ಇನ್ನೂ ದೊಡ್ಡ ಮಹತ್ವ ಮುಂದುವರಿದಿದೆ.

    ಕರೊನಾ ಕಾರಣದಿಂದ ಎರಡು ವರ್ಷಗಳಿಂದ ದಸರಾ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸದೆ ಕುಸ್ತಿ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ. ದಸರಾ ಕುಸ್ತಿ ಪಂದ್ಯಾವಳಿಗೆ ದೊಡ್ಡ ಇತಿಹಾಸವಿದೆ. ರಾಜರ ಕಾಲದಲ್ಲಿ ಪೈಲ್ವಾನರನ್ನು ಕರೆಸಿ ಪ್ರತಿ ವಾರವೂ ಕುಸ್ತಿ ನಡೆಸಲಾಗುತ್ತಿತ್ತು. ಅಲ್ಲದೆ, ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ದಸರಾ ಸಂದರ್ಭ ನಡೆಯುವ ಕುಸ್ತಿ ಪಂದ್ಯದಲ್ಲಿ ತನ್ನ ಬಲ ಪ್ರದರ್ಶಿಸಬೇಕೆಂದು ಇಂದಿಗೂ ನೂರಾರು ಪೈಲ್ವಾನರು ಮುಂಜಾನೆ ಚುಮುಚುಮು ಚಳಿಯಲ್ಲಿಯೇ ಗರಡಿ ಮನೆಗೆ ಹೋಗಿ ಅಭ್ಯಾಸ ನಡೆಸುತ್ತಿದ್ದಾರೆ. ಇಂತಹ ಪರಂಪರೆ ಹೊಂದಿರುವ ಕುಸ್ತಿಯನ್ನು ಈ ಬಾರಿ ಎಂದಿನಂತೆ ಆಯೋಜಿಸಲೇಬೇಕು.
    ಪೈಲ್ವಾನ್ ಮಹದೇವ್, ಜಯಚಾಮರಾಜ ಒಡೆಯರ್ ಗರಡಿ ಸಂಘ, ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts