More

    ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಸಂಚಾರ ತಡೆ

    ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಹೆಚ್ಚುತ್ತಿರುವ ಚಿರತೆಗಳ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಸಣಾಪುರ, ಕರಿಯಮ್ಮನಗಡ್ಡಿ ಗ್ರಾಮಸ್ಥರು ಶನಿವಾರ ಸಂಚಾರ ತಡೆ ನಡೆಸಿದರು.

    ಚಿರತೆ ದಾಳಿಗೆ ಕರಿಯಮ್ಮನಗಡ್ಡಿಯ ರಾಘವೇಂದ್ರ ಎಂಬ ಯುವಕ ವಿರುಪಾಪುರಗಡ್ಡಿಯಲ್ಲಿ ಬಲಿಯಾಗಿದ್ದು, ಆಹೋರಾತ್ರಿ ಧರಣಿ ನಡೆಸಿದ್ದರು. ಪೊಲೀಸರ ಮನವಿ ಮೇರೆಗೆ ಪ್ರತಿಭಟನೆ ಹಿಂಪಡೆದರೂ ಅರಣ್ಯ ಸಚಿವ ಆನಂದ ಸಿಂಗ್ ಬರುವಂತೆ ಗ್ರಾಮಸ್ಥರು ಒತ್ತಾಯಿಸಿ ಸಣಾಪುರ, ಆನೆಗೊಂದಿ ಸಂಪರ್ಕದ ಮುಖ್ಯರಸ್ತೆಯಲ್ಲಿ ಸಂಚಾರ ತಡೆ ನಡೆಸಿದರು. ಅಂತ್ಯಸಂಸ್ಕಾರ ನಡೆಸದೆ ಪ್ರತಿಭಟನೆಗಿಳಿದಿದ್ದು, ಸಚಿವ ಆನಂದ ಸಿಂಗ್ ಮತ್ತು ಅರಣ್ಯಾಧಿಕಾರಿಗಳ ವಿರುದ್ಧ ಹರಿಹಾಯ್ದರು.

    ರಸ್ತೆಗೆ ಮುಳ್ಳು ಬೇಲಿ ಹಾಕಿ ಪ್ರತಿಭಟಿಸಿದ್ದರಿಂದ ಸಂಚಾರ ಸ್ಥಗಿತಗೊಂಡಿದ್ದು, ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗಿತ್ತು. ಚಿರತೆ ಸೆರೆಹಿಡಿಯುವ ಭರವಸೆ ಬೇಡ, ಕಾರ್ಯರೂಪಕ್ಕೆ ಬರಬೇಕು. ಅರಣ್ಯಸಚಿವ ಆನಂದ ಸಿಂಗ್ ಸ್ಥಳಕ್ಕೆ ಬರುವರಿಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನೆ ನಿರತರು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ತಹಸೀಲ್ದಾರ್ ಎಂ.ರೇಣುಕಾ, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಗ್ರಾಮೀಣ ಸಿಪಿಐ ಉದಯರವಿ ನೇತೃತ್ವದ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ನಿರತರನ್ನು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಂತ್ಯಕ್ರಿಯೆ ನೆರವೇರಿಸಿ, ಸಚಿವರೊಂದಿಗೆ ಚರ್ಚೆಗೆ ಏರ್ಪಾಡು ಮಾಡಲಾಗುವುದು ಎಂದು ಅಧಿಕಾರಿಗಳು ಮನವಿ ಮಾಡಿದರೂ ಗ್ರಾಮಸ್ಥರು ಸ್ಪಂದಿಸಲಿಲ್ಲ.

    ಚಿರತೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಬೆಟ್ಟಕ್ಕೆ ಹೊಂದಿಕೊಂಡು ಗ್ರಾಮಗಳಿದ್ದರಿಂದ ರೈತರು, ಕೃಷಿ ಕಾರ್ಮಿಕರು ಮತ್ತು ದನ, ಕುರಿಗಾಹಿಗಳು ದೈನಂದಿನ ಕೆಲಸಕ್ಕಾಗಿ ಹೋಗಲೇಬೇಕಿದೆ. ನರಭಕ್ಷಕ ಚಿರತೆ ಹಾವಳಿಯಿಂದ ದುಡಿಮೆಯನ್ನೇ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಚಿರತೆ ಸೆರೆ ಹಿಡಿಯಿರಿ, ಇಲ್ಲವೇ ಸಾಯಿಸಿ ಎಂದು ಗ್ರಾಪಂ ಸದಸ್ಯ ನಾಗೇಶ, ಗ್ರಾಮಸ್ಥರಾದ ರಘುರಾಮರೆಡ್ಡಿ, ರಾಮಾಂಜನೇಯ ಒತ್ತಾಯಿಸಿದರು.

    ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಸಂಚಾರ ತಡೆ
    ಚಿರತೆ ದಾಳಿಗೆ ಬಲಿಯಾದ ಗಂಗಾವತಿ ತಾಲೂಕಿನ ಕರಿಯಮ್ಮನಗಡ್ಡಿಯ ಯುವಕನ ನಿವಾಸಕ್ಕೆ ಅರಣ್ಯ ಸಚಿವ ಆನಂದ ಸಿಂಗ್ ಶನಿವಾರ ಭೇಟಿ ನೀಡಿದರು. ಶಾಸಕ ಪರಣ್ಣಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಇತರರಿದ್ದರು.

    ಸಚಿವ ಆನಂದ ಸಿಂಗ್ ಭೇಟಿ
    ಮೃತಕುಟುಂಬನ ನಿವಾಸಕ್ಕೆ ಅರಣ್ಯ ಸಚಿವ ಆನಂದಸಿಂಗ್ ಮತ್ತು ಶಾಸಕ ಪರಣ್ಣಮುನವಳ್ಳಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನರಭಕ್ಷಕ ಚಿರತೆ ಸಾಯಿಸಲು ಮೇಲಧಿಕಾರಿಗಳಿಂದ ವರದಿ ಪಡೆದುಕೊಳ್ಳುವ ಭರವಸೆ ನೀಡಿದರಲ್ಲದೆ ವೈಯಕ್ತಿಕ ಮತ್ತು ಸರ್ಕಾರದಿಂದ 10ಲಕ್ಷ ರೂ. ಪರಿಹಾರ ಕೊಡಿಸಲಾಗುವುದು. ಸದ್ಯಕ್ಕೆ 2ಲಕ್ಷ ರೂ.ಪರಿಹಾರ ನೀಡಲಾಗುತ್ತಿದ್ದು, ಅಂತಿಮ ವರದಿ ಬಂದ ನಂತರ ಉಳಿದ ಪರಹಾರ ಕೊಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಡಿಸಿ ವಿಕಾಸ ಕಿಶೋರ ಇತರರಿದ್ದರು.

    ನರಭಕ್ಷಕ ಹುಲಿ ಮತ್ತು ಚಿರತೆಗಳನ್ನು ಸಾಯಿಸಲು ಕಾನೂನು ತೊಡಕುಗಳಿದ್ದು, ದಿಢೀರ್ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ನರಭಕ್ಷಕ ಪ್ರಾಣಿಗಳ ಹತ್ಯೆಗೈಯಲು ಮೇಲಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇನ್ನೆರೆಡು ದಿನದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಇಲ್ಲಿನ ಪ್ರವಾಸೋದ್ಯಮಕ್ಕೆ ತೊಂದರೆಯನ್ನುಂಟು ಮಾಡಲು ಅನ್ಯ ಜಿಲ್ಲೆಯವರು ಚಿರತೆಯನ್ನು ಬಿಟ್ಟಿದ್ದಾರೆ ಎಂಬ ಆರೋಪ ತಳ್ಳಿಹಾಕಿದ್ದು, ತಾಂತ್ರಿಕ ಕಾರಣಗಳ ಬಗ್ಗೆ ಯಾವುದೇ ಚರ್ಚೆ ಮಾಡಲ್ಲ.
    | ಆನಂದ ಸಿಂಗ್ ಅರಣ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts