More

    ರೈತ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ

    ಸವಣೂರ: ತಾಲೂಕಿನ ರೈತರ ಪಹಣಿಯಲ್ಲಿನ ನ್ಯೂನತೆ ಸರಿಪಡಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪಟ್ಟಣದ ಕಂದಾಯ ಇಲಾಖೆ ಮುಂಭಾಗದಲ್ಲಿ ಸೋಮವಾರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು.

    ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಪ್ರಕಾಶ ಬಾರ್ಕಿ ಮಾತನಾಡಿ, ರೈತರ ಪಹಣಿಯ ಕಾಲಂ ನಂ. 6, 9, 11, 12 ರಲ್ಲಿ ಸುಮಾರು 40 ವರ್ಷಗಳಿಂದ ಸರ್ಕಾರ, ಹೊಸ ಶರ್ತು, ಅದರ್ಸ, ಇನಾಮ, ಖಾಲಸಾ, ವತನ ರದ್ಧತಿ, ಜೋಡಿ ಕೊಡುವ ಕರಾರು ಹಾಗೂ 15 ವರ್ಷ ಪರಾಧೀನ ಮಾಡಬಾರದು ಎಂದು ದಾಖಲಾಗಿದೆ. ಇದರಿಂದ ಸಾಲ, ಸರ್ಕಾರದ ಸೌಲಭ್ಯ, ಅಣ್ಣ ತಮ್ಮಂದಿರಿಗೆ ಆಸ್ತಿ ವಿಂಗಡಣೆ ಮಾಡಿಕೊಳ್ಳಲಾಗದೆ ರೈತರು ಕಂದಾಯ ಇಲಾಖೆಗೆ ಅಲೆದಾಡುವಂತಾಗಿದೆ ಎಂದರು.

    ಪ್ರತಿಭಟನಾ ಸಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್, ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇರುವ ಪಹಣಿ ಪತ್ರಿಕೆಯಲ್ಲಿನ ನ್ಯೂನತೆ ಸರಿಪಡಿಸುವ ಕೆಲಸ ತ್ವರಿತವಾಗಿ ನಿಭಾಯಿಸುತ್ತೇವೆ. ಉಳಿದ ಕೆಲಸವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.

    ರೈತ ಮುಖಂಡ ಚನ್ನಪ್ಪ ಮರಡೂರ ಮಾತನಾಡಿ, ರೈತರ ಪಹಣಿಯಲ್ಲಿನ ನ್ಯೂನತೆ ಸರಿಪಡಿಸುವ ಭರವಸೆ ನೀಡಿದರೆ ಸಾಲದು. ಕಂದಾಯ ಸಚಿವರು ಆಗಮಿಸಿ ಎಲ್ಲ ನ್ಯೂನತೆ ಸರಿಪಡಿಸುವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.
    ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಭರತ್‌ರಾಜ ಕೆ.ಎನ್., ಡಿವೈಎಸ್‌ಪಿ ಮಂಜುನಾಥ ಜಿ., ಸಿಪಿಐ ಶಶಿಧರ ಜೆ., ಹುಲಗೂರ ಪಿಎಸ್‌ಐ ಪರಶುರಾಮ ಕಟ್ಟಿಮನಿ ಭೇಟಿ ನೀಡಿದರು.

    ರೈತ ಸಂಘ ರಾಜ್ಯ ಘಟಕ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪದಾಧಿಕಾರಿಗಳಾದ ರಮೇಶ ದೊಡ್ಡೂರ, ಸಂಗಮೇಶ ಪಿತಾಂಬ್ರಶೆಟ್ಟಿ, ನೂರಅಹ್ಮದ ಮುಲ್ಲಾ, ಅಬ್ದುಲ್‌ಖಾದರ ಬುಡಂದಿ, ಬಸವರಾಜ ದೇವಗೇರಿ, ಮಲ್ಲೇಶ ಬಾರ್ಕಿ, ಫಕೀರಪ್ಪ ಜೋಗೇರ, ರವಿ ದೊಡ್ಡಮನಿ, ಚನ್ನವೀರಸ್ವಾಮಿ ಹೊಸಮಠ, ಎಂ.ಎನ್. ನಾಯಕ, ಹನುಮಂತಪ್ಪ ಕಬ್ಬಾರ, ರಾಜು ತರ್ಲಘಟ್ಟ, ಕುಮಾರ ಬಂಡಿವಡ್ಡರ, ಫರೀದ ನದಾಫ, ಶಂಕ್ರಪ್ಪ ಬೆಂಡಿಗೇರಿ ಇತರರು ಇದ್ದರು.

    ಪಟ್ಟಣದಲ್ಲಿ 2000 ಇಸ್ವಿಯಲ್ಲಿ ನಡೆದ ನೀರಿನ ಗಲಭೆಯಲ್ಲಿ ಕಚೇರಿಗೆ ಬೆಂಕಿ ಬಿದ್ದು ದಾಖಲಾತಿ ಸುಟ್ಟಿವೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ದಾಖಲೆಗಳು ಸುಟ್ಟಿಲ್ಲ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು. ಸುಟ್ಟಿವೆ ಎಂದು ಮಾಹಿತಿ ನೀಡುವ ದಾಖಲಾತಿಗಳು ಕಚೇರಿಯ ಪಕ್ಕದ ಗೋದಾಮಿನಲ್ಲಿ ರೈತರು ಪತ್ತೆ ಹಚ್ಚಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ.

    ಪ್ರಕಾಶ ಬಾರ್ಕಿ, ರೈತ ಸಂಘದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts