More

    ಎಲ್​ಇಡಿ ಬೀದಿ ದೀಪ ಸಮೀಕ್ಷೆ ಆರಂಭ

    ಹುಬ್ಬಳ್ಳಿ: ಅವಳಿನಗರದಲ್ಲಿ ಈಗಿರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ ಎಲ್​ಇಡಿ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಈಗಾಗಲೇ ಯೋಜನಾ ಸಮಾಲೋಚಕರನ್ನು ನೇಮಿಸಲಾಗಿದ್ದು, ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ತಿಳಿಸಿದರು.

    ಸೋಮವಾರ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹುಬ್ಬಳ್ಳಿ ಚನ್ನಮ್ಮ ವೃತ್ತದ ಬಳಿಯ ಪಾಲಿಕೆ ಒಡೆತನದ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ 63,632 ಸಾಂಪ್ರದಾಯಿಕ ಬೀದಿ ದೀಪಗಳಿವೆ. ಇವನ್ನು ಬದಲಾಯಿಸಿ ಎಲ್​ಇಡಿ ಬೀದಿ ದೀಪಗಳನ್ನು ಅಳವಡಿಸುವುದರಿಂದ ವಿದ್ಯುತ್ ಬಿಲ್ ಕಡಿಮೆಯಾಗಿ ಆರ್ಥಿಕ ಹೊರೆ ತಗ್ಗಲಿದೆ ಎಂದರು.

    ಶಿವಳ್ಳಿಯಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ಕಾಮಗಾರಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ 2.26 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. 3.30 ಕೋಟಿ ರೂ. ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿವೆ. 126 ಕೋಟಿ ರೂ. ವೆಚ್ಚದ ನಗರೋತ್ಥಾನ ಯೋಜನೆಯಡಿ 45 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

    ಅವಳಿ ನಗರದಲ್ಲಿ 90,236 ಖಾಲಿ ನಿವೇಶನಗಳಿದ್ದು, ನಮ್ಮ ನಗರ-ಸ್ವಚ್ಛ ನಗರ ಅಭಿಯಾನದಡಿ 20 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲಾಗಿದೆ. ಖಾಲಿ ನಿವೇಶನಗಳಲ್ಲಿ ಪಾಲಿಕೆಯಿಂದ ಪರವಾನಿಗೆ ಇಲ್ಲದೇ ಮನೆ ಕಟ್ಟಿಕೊಂಡಿರುವ 3637 ಪ್ರಕರಣಗಳು ಪತ್ತೆಯಾಗಿದ್ದು, 9.43 ಕೋಟಿ ರೂ. ಆಸ್ತಿ ತೆರಿಗೆ ಪಾವತಿಗೆ ಚಲನ್ ನೀಡಿದ್ದೇವೆ. ಇದರಲ್ಲಿ 1.12 ಕೋಟಿ ರೂ. ಪಾವತಿಯಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ ಎಂದರು.

    ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವಿಪಕ್ಷ ನಾಯಕ ದೋರಾಜ ಮಣಿಕುಂಟ್ಲ, ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಕಿಶನ್ ಬೆಳಗಾವಿ, ಚಂದ್ರಿಕಾ ಮೇಸ್ತ್ರಿ, ನಿರಂಜನ ಹಿರೇಮಠ, ನಜೀರ ಅಹ್ಮದ ಹೊನ್ಯಾಳ, ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಹು-ಧಾ ಸ್ಮಾರ್ಟ್ ಸಿಟಿ ಎಂಡಿ ಶಕೀಲ್ ಅಹ್ಮದ್, ಜೆಎಂಡಿ ಎ.ಆರ್. ದೇಸಾಯಿ, ಪಾಲಿಕೆ ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಇತರರು ಇದ್ದರು. ಸಹಾಯಕ ಆಯುಕ್ತ ಎಸ್.ಸಿ. ಬೇವೂರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts