More

    ಉತ್ತಮ ಸೇವೆಯಿಂದ ವೃತ್ತಿಗೆ ಗೌರವ

    ಕೋಲಾರ: ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಸಂವಿಧಾನ ಉಳಿಸುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಉತ್ತಮ ಸೇವೆ ಸಲ್ಲಿಸಿದಾಗ ವೃತ್ತಿಗೆ ಗೌರವ ಸಿಗುತ್ತದೆ ಎಂದು ನಿವೃತ್ತ ಅಪರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್​ ಹೇಳಿದರು.

    ನಗರದ ಜಿಲ್ಲಾ ಪೊಲೀಸ್​ ಕವಾಯತು ಮೈದಾನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್​ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್​ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೊಲೀಸರೆ ಧ್ವಜದ ಸಂಕೇತ. ಪೊಲೀಸರ ಶ್ರಮ, ಸಾಧನೆ, ಗೌರವ, ಪ್ರೀತಿಯನ್ನು ಸಾರ್ವಜನಿಕರು ಗಮನಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೇವೆ ಸಲ್ಲಿಸಬೇಕು ಎಂದರು.

    ನಿಮ್ಮ ಕಲ್ಯಾಣ ನಿಮ್ಮಿಂದಲೇ ಸಾಧ್ಯ ಹೊರತು ಬೇರೆಯವರಿಂದ ಸಾಧ್ಯವಾಗುವುದಿಲ್ಲ. ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ನೀವೇ ನೋಡಿಕೊಳ್ಳಿ. ಎಷ್ಟೇ ಕೆಲಸದ ಒತ್ತಡವಿದ್ದರೂ ಸ್ವಲ್ಪ ಸಮಯ ನಿಮಗಾಗಿ ಮೀಸಲಿಟ್ಟುಕೊಳ್ಳಿ ಎಂದು ಸಿಬ್ಬಂದಿಗೆ ಸಲಹೆ ನೀಡಿದರು.

    ಜಿಲ್ಲೆಗೆ ಎಂ.ನಾರಾಯಣ ಅವರು ಎಸ್ಪಿ ಆಗಿ ಬಂದ ಬಳಿಕ ಅವರಲ್ಲಿದ್ದ ಕಲ್ಪನೆಯನ್ನು ಬಹಳ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ನಾವೂ ಹಲವಾರು ಪರೇಡ್​ನಲ್ಲಿ ಭಾಗಿಯಾಗಿದ್ದು, ಅಧಿಕಾರಿಗಳ ಪರಿಶೀಲನೆ ಎಲ್ಲದರಲ್ಲೂ ಮೆಚ್ಚುಗೆ ಪಡೆದುಕೊಂಡಿದ್ದೆವು. ಪೊಲೀಸ್​ ಕಲ್ಯಾಣ ಕೆಲಸ ಕಾರ್ಯ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ, ಒಳ್ಳೆಯ ಕೆಲಸ ಮಾಡಿದವರಿಗೆ ಬೆನ್ನು ತಟ್ಟಿದ್ದಾರೆ. ಅಂತೆಯೇ ಕೋಲಾರದ ಪೊಲೀಸರೂ ಉತ್ತಮ ಸಾಧನೆ ಮಾಡಿದ್ದೀರಿ. ಸಾಕಷ್ಟು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ್ದು, ಅಭಿನಂದನಾರ್ಹದ ಸಂಗತಿ ಎಂದರು.

    ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ
    ಎಸ್ಪಿ ಎಂ.ನಾರಾಯಣ ವರದಿ ವಾಚಿಸಿ ಮಾತನಾಡಿ, ಪೊಲೀಸ್​ ಇಲಾಖೆ 24 ಗಂಟೆಯೂ ಒತ್ತಡದಲ್ಲೇ ಕೆಲಸ. ತ್ಯಾಗ ಬಲಿದಾನ ಸ್ಮರಿಸಿ ಪೊಲೀಸ್​ ಧ್ವಜ ದಿನಾಚರಣೆ ನಡೆಸಿಕೊಂಡು ಬರಲಾಗುತ್ತಿದೆ. ನಾವು ದೈಹಿಕ ಹಾಗೂ ಮಾನಸಿಕವಾಗಿ ಭದ್ರತೆ ಹೊಂದಬೇಕು. ಕರ್ತವ್ಯ ನಿಷ್ಠೆ, ಘನತೆ ಹೆಚ್ಚಿಸಲು ನಮ್ಮನ್ನು ನಾವು ಅರ್ಪಣೆ ಮಾಡಿಕೊಳ್ಳಬೇಕು ಎಂದ ಅವರು, ಸಿಬ್ಬಂದಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್​ ಮಾತನಾಡಿ, ಸೇವೆ ಮಾಡುವವರ ಕಷ್ಟವನ್ನು ಸಮಾಜ ಗುರುತಿಸುವುದಿಲ್ಲ. ಹಾಗಾಗಿ ನಮಗೆ ನಾವೇ ಸನ್ಮಾನಿಸಿಕೊಳ್ಳಬೇಕು. ನಾವು ನಡೆಸುವ ತನಿಖೆ, ತೀರ್ಪು ಎಲ್ಲವೂ ತಾತ್ಕಾಲಿಕ ಅಷ್ಟೇ ಅದನ್ನು ಮನಸ್ಸಲ್ಲಿಟ್ಟುಕೊಂಡು ಉತ್ತಮವಾಗಿ ಕೆಲಸ ಮಾಡಬೇಕು ಎಂದರು. ನ್ಯಾಯಾಧೀಶರು, ಪೊಲೀಸರಿಗೆ ಅವಿನಾಭಾವ ಸಂಬಂಧ. ಯಾವುದೇ ಘಟನೆ ನಿಭಾಯಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿರುತ್ತದೆ ಎಂದರು.
    ಸನ್ಮಾನ
    ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಅತಿಥಿಗಳು ವಂದನೆ ಸ್ವೀಕರಿಸಿದರು. ವಿವಿಧ ಠಾಣೆಗಳ ಪೊಲೀಸ್​ ತಂಡಗಳಿಂದ ಪಥಸಂಚಲನ ನಡೆಯಿತು. ಬಳಿಕ ನಿವೃತ್ತ ಪೊಲೀಸ್​ ಅಧಿಕಾರಿ, ಸಿಬ್ಬಂದಿ, ಕಲ್ಯಾಣ ಕೇಂದ್ರ, ಪೊಲೀಸ್​ ಕ್ಯಾಂಟೀನ್​, ಪೊಲೀಸ್​ ಗ್ರಂಥಾಲಯ, ಪೊಲೀಸ್​ ಟೈಪಿಂಗ್​ ಇನ್​ಸ್ಟಿಟ್ಯೂಟ್​, ಪೊಲೀಸ್​ ಬ್ಯಾಂಡ್​, ಎ.ಎಸ್​.ಸಿ. ತಂಡ. ಪೊಲೀಸ್​ ಮೆಡಿಕಲ್​ ಸ್ಟೋರ್​, ಸಮುದಾಯ ಭವನದ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts