More

    ಪೊಲೀಸರು ವೃತ್ತಿ ಗೌರವ ಹೆಚ್ಚಿಸಿಕೊಳ್ಳಲಿ

    ಶಿವಮೊಗ್ಗ: ಪೊಲೀಸ್ ಸಿಬ್ಬಂದಿ ವೃತ್ತಿ ಗೌರವ ಹೆಚ್ಚಿಸಿಕೊಳ್ಳಬೇಕು. ಸಾರ್ವಜನಿಕರಲ್ಲಿ ಇನ್ನಷ್ಟು ನಂಬಿಕೆ ಮೂಡಿಸಬೇಕು ಎಂದು ಡಿಎಆರ್ ನಿವೃತ್ತ ಆರ್‌ಎಸ್‌ಐ ಗಂಗಾಧರಪ್ಪ ಹೇಳಿದರು.

    ಡಿಎಆರ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯು ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳ್ಳಬೇಕು. ಸಿಬ್ಬಂದಿ ವೃತ್ತಿಪರತೆ ಹಾಗೂ ಕೌಶಲ ರೂಢಿಸಿಕೊಳ್ಳಬೇಕು ಎಂದರು.
    ಇಲಾಖೆ ಹಾಗೂ ಸಿಬ್ಬಂದಿ ಒಳಿತಿಗಾಗಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಶ್ರಮಿಸುತ್ತಿದ್ದಾರೆ. ಕಲ್ಯಾಣಭವನ ನಿರ್ಮಾಣವಾಗಿದೆ. ಪೊಲೀಸರ ಮಕ್ಕಳಿಗಾಗಿ ಪಾರ್ಕ್ ನಿರ್ಮಿಸಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನದ ನವೀಕರಣವಾಗಿದೆ. ಇದೆಲ್ಲವೂ ಉತ್ತಮ ಕಾರ್ಯಗಳಾಗಿವೆ. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆಂದು ಪ್ರತ್ಯೇಕ ಅತಿಥಿ ಗೃಹ ನಿರ್ಮಿಸಬೇಕು ಎಂದು ಮನವಿ ಮಾಡಿದರು.
    ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಕರ್ನಾಟಕ ಪೊಲೀಸ್ ಕಾಯ್ದೆ 1963ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಏ.2ನ್ನು ಪೊಲೀಸ್ ಧ್ವಜ ದಿನ ಎಂದು ಆಚರಣೆ ಮಾಡಿಕೊಂಡು ಬರಲಾಗಿದೆ. ಕಳೆದ ಒಂದು ವರ್ಷದಲ್ಲಿ ನಿವೃತ್ತರಾದ ಮೂವರು ಪಿಎಸ್‌ಐ, ಓರ್ವ ಮಹಿಳಾ ಪಿಎಸ್‌ಐ, 23 ಎಎಸ್‌ಐ, ಇಬ್ಬರು ಆರ್‌ಎಸ್‌ಐ, ನಾಲ್ವರು ಎಆರ್‌ಎಸ್‌ಐ, ಒಬ್ಬರು ಮುಖ್ಯ ಪೇದೆ, ಮೂವರು ಪೇದೆಗಳು ಹಾಗೂ ಓರ್ವ ಎಫ್‌ಡಿಎ ಸಿಬ್ಬಂದಿಯನ್ನು ಗೌರವಿಸಲಾಗುತ್ತಿದೆ ಎಂದರು.
    ನಿವೃತ್ತ ಪೊಲೀಸ್ ಕಲ್ಯಾಣ ನಿಧಿ ಸ್ಥಾಪಿಸಲಾಗಿದ್ದು, ಇದರ ಮೂಲಕ ಪೊಲೀಸ್ ಸಾಂಕೇತಿಕ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣದಲ್ಲಿ ಶೇ.50ರಷ್ಟು ನಿವೃತ್ತ ಕ್ಷೇಮ ನಿಧಿಗೆ ಜಮಾ ಮಾಡಲಾಗುತ್ತದೆ. ಉಳಿದ ಶೇ.50 ಅನ್ನು ಕೇಂದ್ರ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ. ನಿವೃತ್ತ ಪೊಲೀಸ್ ಸಿಬ್ಬಂದಿ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದರೆ ಈ ನಿಧಿಯಿಂದ ಅವರ ಚಿಕಿತ್ಸೆ ಮತ್ತು ಔಷಧಕ್ಕೆ ಧನಸಹಾಯ ಮಾಡಲಾಗುತ್ತದೆ ಎಂದು ಹೇಳಿದರು.
    ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರ್ಯಪ್ಪ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts