More

    ಕಳೆಗಟ್ಟುತ್ತಿದೆ ಕಟ್ಟಡ ಕಾಮಗಾರಿ

    ಬೆಳಗಾವಿ: ಉದ್ಯೋಗಕ್ಕಾಗಿ ಹುಟ್ಟೂರು ಬಿಟ್ಟು ಹೊರರಾಜ್ಯ, ಹೊರ ಜಿಲ್ಲೆಗಳಿಗೆ ತೆರಳಿದ್ದವರೆಲ್ಲ ಲಾಕ್‌ಡೌನ್ ಅವಧಿಯಲ್ಲಿ ಮತ್ತೆ ಸ್ವಂತ ಊರಿಗೆ ಆಗಮಿಸಿದ್ದರು. ಅಂತಹ ಬಹುತೇಕ ಜನ ಇಲ್ಲಿಯೇ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇದೀಗ ಕಟ್ಟಡ ನಿರ್ಮಾಣ ಉದ್ಯಮ ಪ್ರಗತಿ ಕಾಣುತ್ತಿದೆ.

    ಪುಣೆ, ಮುಂಬೈ, ಬೆಂಗಳೂರು ಹಾಗೂ ಹೈದ್ರಾಬಾದ್‌ಗಳಲ್ಲಿ ಉದ್ಯೋಗ ಮಾಡುತ್ತಿದ್ದ ಸ್ಥಿತಿವಂತರು ಈಗಾಗಲೇ ಕರೊನಾ ಕಾರಣದಿಂದಾಗಿ ತಮ್ಮ ಹಳ್ಳಿಗಳಿಗೆ ವಾಪಸ್ಸಾಗಿದ್ದಾರೆ. ಹಳ್ಳಿಗೆ ಸಮೀಪದಲ್ಲಿಯೇ ಅಗತ್ಯ ಮೂಲ ಸೌಕರ್ಯ ಹೊಂದಿರುವ ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಬಂಡವಾಳ ಹೂಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಇದ್ದರೂ ನಿವೇಶನಕ್ಕೆ ಬೇಡಿಕೆ ಬರುತ್ತಿದೆ. ಇದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ
    ಆಶಾಭಾವ ಮೂಡಿಸಿದೆ.

    ಬೆಲೆಯಲ್ಲಿ ತುಸು ಇಳಿಕೆ: ಲಾಕ್‌ಡೌನ್ ಅವಧಿಯಲ್ಲಿ ಕಂಪನಿಗಳು ಸ್ಥಗಿತಗೊಂಡಿದ್ದರಿಂದ ಜೂನ್‌ನಿಂದಲೇ ಕಟ್ಟಡ ಕಾಮಗಾರಿ ಆರಂಭವಾದಾಗ ಸ್ವಲ್ಪಮಟ್ಟಿಗೆ ಉತ್ಪನ್ನಗಳ ಕೊರತೆಯಾಗಿ, ಉದ್ಯಮಕ್ಕೆ ಬೆಲೆ ಏರಿಕೆಯ ಬಿಸಿ ಮುಟ್ಟಿತ್ತು. ಆದರೆ, ಇದೀಗ ಕಬ್ಬಿಣ, ಸಿಮೆಂಟ್, ಇಟ್ಟಿಗೆ ಸೇರಿದಂತೆ ಇತರ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಂಡಿದೆ. ಹೀಗಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಅಷ್ಟೇ ಅಲ್ಲದೆ, ಗುತ್ತಿಗೆದಾರರು ಪಡೆದಿದ್ದ ವಾಣಿಜ್ಯ ಸಂಕೀರ್ಣ, ರಸ್ತೆ, ಕಚೇರಿ ಹಾಗೂ ಇತರೆ ಕಟ್ಟಡಗಳ ಕಾಮಗಾರಿಗಳೂ ಸಹ ದೊಡ್ಡಮಟ್ಟದಲ್ಲಿ ಆರಂಭಗೊಂಡಿವೆ.

    ಕಾರ್ಮಿಕರಿಗೆ ಕೂಲಿ: ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಬಿ.ಕೆ.ಕಂಗ್ರಾಳಿಯಲ್ಲಿರುವ ಕಟ್ಟಡ ಕಾರ್ಮಿಕರಾದ ಹುಸೇನ್ ಮತ್ತು ಮಹ್ಮದ್ ಪಠಾಣ ಅವರು, ‘ನಮ್ಮೊಂದಿಗೆ ಕೆಲಸ ಮಾಡುವ ಕಾರ್ಮಿಕರು ಕರೊನಾದಿಂದ ಹೆಚ್ಚು ಕಷ್ಟ ಅನುಭವಿಸಿದರು. ಅವರಲ್ಲಿ ಕೆಲವರಿಗೆ ಸರ್ಕಾರದ 5 ಸಾವಿರ ರೂ. ಸಿಕ್ಕಿದೆ. ಇನ್ನೂ ಕೆಲವರಿಗೆ ಬಂದಿಲ್ಲ. ಆದರೆ, ಇದೀಗ ದಿನವೂ ಎಲ್ಲರಿಗೂ ಕೆಲಸ ಸಿಗುತ್ತಿದೆ. ಕಾಮಗಾರಿ ಹೆಚ್ಚಿರುವುದರಿಂದ ನಮ್ಮ ಕೂಲಿಯನ್ನು ಹೆಚ್ಚಿಸಿಕೊಂಡಿದ್ದೇವೆ’ ಎಂದರು.

    ನಿವೇಶನಗಳಿಗೆ ಬೇಡಿಕೆ: ಕರೊನಾ ನಂತರ ಕುಂದಾನಗರಿ ಮಾತ್ರವಲ್ಲದೆ, ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿಯೂ ಜನರು ರಿಯಲ್ ಎಸ್ಟೇಟ್‌ನತ್ತ ಮುಖಮಾಡಿರುವುದು ಗಮನಾರ್ಹ. ಯರಗಟ್ಟಿ, ಗೋಕಾಕ, ಬೈಲಹೊಂಗಲ, ಸವದತ್ತಿ, ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ ತಾಲೂಕಿನ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕೃಷಿ ಭೂಮಿಗಳನ್ನು ನಿವೇಶನಗಳನ್ನಾಗಿ ಮಾರ್ಪಾಡು ಮಾಡುವ ಕಾರ್ಯ ನಡೆದಿದೆ. ಬೆಳಗಾವಿ, ಹಿರೇಬಾಗೇವಾಡಿಯಲ್ಲಿಯೂ ನಿವೇಶನಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಇಲ್ಲಿ ನಿವೇಶನಗಳ ಬೆಲೆ ಸಹ ಹೆಚ್ಚಿದೆ.

    15 ಸಾವಿರ ಕಾರ್ಮಿಕರ ಕೈ ಸೇರದ ಪರಿಹಾರ: ಜಿಲ್ಲೆಯಲ್ಲಿ 80,000 ಜನ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದಾರೆ. ಲಾಕ್‌ಡೌನ್ ಕಾರಣ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ 5 ಸಾವಿರ ರೂ. ಪರಿಹಾರ ಇನ್ನೂ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ದೊರೆತಿಲ್ಲ. ಸರ್ಕಾರ ಅವರಿಗೆ ಪರಿಹಾರ ನೀಡಬೇಕು. ಈ ಕುರಿತು ಈಗಾಗಲೇ ಕಾರ್ಮಿಕ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಕಾಲಕ್ಕೆ ವಿತರಿಸದೆ ಕಾರ್ಮಿಕರನ್ನು ಕಷ್ಟಕ್ಕೆ ತಳ್ಳುತ್ತಿದ್ದಾರೆ ಎನ್ನುವುದು ಕಾರ್ಮಿಕ ಸಂಘಟನೆಪರ ವಕೀಲ ಎನ್.ಆರ್.ಲಾತೂರ್ ಅವರ ಆರೋಪ.

    ಆರಂಭದಲ್ಲಿ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್‌ದಿಂದ ಉದ್ಯಮ ನಷ್ಟಕ್ಕೆ ಸಿಲುಕಲಿದೆ ಎಂಬ ಅನುಮಾನ ಕಾಡುತ್ತಿತ್ತು. ಆದರೆ, ಇದೀಗ ಪ್ರತಿದಿನವೂ ನೂರಾರು ಜನರು ಲೇಔಟ್ ವೀಕ್ಷಿಸಲು ಬರುತ್ತಿದ್ದಾರೆ. ಮನೆ ನಿರ್ಮಾಣ ವಿನ್ಯಾಸ ಹಾಗೂ ಸೌಲಭ್ಯಗಳಲ್ಲಿ ಹೆಚ್ಚಿನ ಹೊಸತನ್ನು ಬಯಸುತ್ತಿದ್ದಾರೆ. ಲಾಕ್‌ಡೌನ್‌ನ ಮೊದಲಿನಿಗಿಂತಲೂ ಇತ್ತೀಚೆಗೆ ಉತ್ತಮ ವಹಿವಾಟು ನಡೆಯುತ್ತಿದೆ.
    | ಚೈತನ್ಯ ಕುಲಕರ್ಣಿ, ಕ್ರೆಡೈ ನಿಯೋಜಿತ ಅಧ್ಯಕ್ಷ

    ಭೂಮಿ ಖರೀದಿಯಲ್ಲಿನ ಸರ್ಕಾರದ ನಿಯಮಗಳು ಹೆಚ್ಚಾಗಿವೆ. ಸಿಮೆಂಟ್, ಕಬ್ಬಿಣ, ಮರಳು, ಪಿಒಪಿ ಹಾಗೂ ಪೀಠೋಪಕರಣ ಸೇರಿ ಕಚ್ಚಾ ವಸ್ತುಗಳ ಬೆಲೆ ಕರೊನಾ ಬರುವ ಪೂರ್ವಕ್ಕಿಂತಲೂ ತುಸು ಹೆಚ್ಚೇ ಇದೆ. ಆದರೂ, ಈಗಲೇ ಮನೆ ಕಟ್ಟಲೇಬೇಕಿದೆ. ಹೀಗಾಗಿ ನಿರ್ಮಾಣ ಕೆಲಸ ಆರಂಭಿಸಿದ್ದೇವೆ.
    | ಮಹೇಶ ಅಂಗಡಿ ಬೆಳಗಾವಿ ನಿವಾಸಿ

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts