More

    ಜಯಂತಿನಗರದಲ್ಲಿ ಜಮೀನು ಸರ್ವೇ

    ಪಾಂಡವಪುರ: ತಾಲೂಕಿನ ಜಯಂತಿನಗರದಲ್ಲಿ ಬಡವರಿಗೆ ಹಂಚಿಕೆ ಮಾಡಲಾಗಿದ್ದ ನಿವೇಶನಗಳ ಭೂಮಿ ಒತ್ತುವರಿಯಾಗಿದ್ದು, ಫೆ.17ರಂದು ಇಡೀ ಜಮೀನು ಸರ್ವೇ ನಡೆಸಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.


    ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿ, ಮೂರು ದಶಕಗಳ ಹಿಂದೆ ಜಯಂತಿನಗರದ ಸರ್ವೇ ನಂ.186 ರಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ಹಂಚಿಕೆಯಾಗಿದ್ದ 253 ನಿವೇಶನಗಳ ಜಮೀನು ಒತ್ತುವರಿಯಾಗಿದ್ದು, ಕೆಲ ಬಡವರು ಮನೆ ನಿರ್ಮಿಸಿಕೊಂಡಿದ್ದಾರೆ. ಮನೆ ಕೆಡವಿ ಬಡವರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಹೀಗಾಗಿ ಯಾರೊಬ್ಬರನ್ನು ತೆರವುಗೊಳಿಸದೆ ಇಡೀ ಜಮೀನನ್ನು ಸರ್ವೇ ಮಾಡಿಸಿ ಗ್ರಾಮದಲ್ಲಿ ವಾಸವಿರುವ ಅರ್ಹ ಫಲಾನುಭವಿಗಳಿಗೆ ನಿವೇಶನ ಮರು ಹಂಚಿಕೆ ಮಾಡಲಾಗುವುದು. ಗ್ರಾಪಂ ಆಡಳಿತ ಮಂಡಳಿ ನಿರ್ಣಯ ಕೂಡ ಇದೆ ಆಗಿದೆ. ಹಿಂದೆ ಹಕ್ಕುಪತ್ರ ಪಡೆದು ಬೇರೆಡೆ ವಾಸ ಮಾಡುತ್ತಿದ್ದರೆ ಅಂತವರಿಗೆ ನಿವೇಶನದ ಒಡೆತನ ಸಿಗುವುದಿಲ್ಲ ಎಂದು ತಿಳಿಸಿದರು.


    ನಿವೇಶನ ಹಂಚಿಕೆ ಸಂದರ್ಭದಲ್ಲಿ ಮಾಡಿರುವ ಪ್ಲ್ಯಾನಿಂಗ್‌ನಂತೆ ಕೆರೆ, ಸ್ಮಶಾನಕ್ಕೆ ಮೀಸಲಾಗಿರುವ ಜಾಗವನ್ನು ಬಿಡಲಾಗುವುದು. ಸರ್ವೇ ಕಾರ್ಯ ಮುಗಿದ ಬಳಿಕ ನಿವೇಶನಗಳಿಗೆ ನಂಬರ್ ಗುರುತು ಮಾಡಿ ಫಲಾನುಭವಿಗಳ ಹೆಸರಿನ ನಾಮಫಲಕ ಅಳವಡಿಸಲಾಗುವುದು. ಅರ್ಹ ಫಲಾನುಭವಿಗಳಿಗೆ ಮೋಸವಾಗದಂತೆ ಕ್ರಮ ವಹಿಸಲು ತಾಲೂಕು ಪಂಚಾಯಿತಿ ಇಒ ಮತ್ತು ಪಿಡಿಒ ಅವರಿಗೆ ಸೂಚಿಸಲಾಗಿದೆ. ಹೆಚ್ಚುವರಿ ಫಲಾನುಭವಿಗಳಿದ್ದರೆ ಪಕ್ಕದಲ್ಲಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸರ್ವೇ ಕಾರ್ಯ ನಡೆಯುವ ದಿನ ನಿವೇಶನದ ಫಲಾನುಭವಿಗಳು ಹಾಗೂ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಸ್ಥಳದಲ್ಲಿ ಹಾಜರಿರಬೇಕು. ಇಡೀ ರಾಜ್ಯದಲ್ಲೇ ಒತ್ತುವರಿ ಸಮಸ್ಯೆ ಹೆಚ್ಚಾಗಿದೆ. ನನ್ನನ್ನು ಸೇರಿದಂತೆ ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ಸ್ವಯಂ ಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಲು ಸಹಕರಿಸಬೇಕು. ಆಗ ಮಾತ್ರ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.


    ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ತಾಲೂಕು ಪಂಚಾಯಿತಿ ಇಒ ಲೋಕೇಶ್‌ಮೂರ್ತಿ, ಗ್ರಾಪಂ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ದೇವಿಕಾ, ಪಿಡಿಒ ರಫಿಕ್, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರುದ್ರ, ಶ್ವೇತಾ ಸುರೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts