More

    ಕೆರೆಗಳ ಅಭಿವೃದ್ಧಿಗೆ ತಯಾರಿ

    ಪ್ರವೀಣ್‌ರಾಜ್ ಕೊಲ ಕಡಬ
    ಪ್ರಸಕ್ತ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕಡಬ ತಾಲೂಕು ಕುಟ್ರುಪಾಡಿ ಗ್ರಾಮ ಪಂಚಾಯಿತಿ ಆಡಳಿತ ತನ್ನ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿರುವ ಹೂಳು ತುಂಬಿದ ಕೆರೆಗಳನ್ನು ಪುನರುಜ್ಜೀವನಗೊಳಿಸಿ ಜಲಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ.
    ಗ್ರಾಪಂ ವ್ಯಾಪ್ತಿಯ ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹಳೇ ಸ್ಟೇಶನ್‌ನ 5 ಎಕರೆ ವಿಸ್ತೀರ್ಣದ ಪೊಟ್ಟುಕೆರೆ ಹಾಗೂ ಅದರ ಹತ್ತಿರದಲ್ಲಿರುವ 7 ಎಕರೆ ವಿಸ್ತೀರ್ಣದ ಹೊಸಕೆರೆಯನ್ನು ಹೂಳೆತ್ತಲು ತೀರ್ಮಾನಿಸಲಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಪ್ರಮುಖರನ್ನೊಳಗೊಂಡ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಕೆರೆಗಳ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗಿದೆ. ಕೆರೆಗಳ ಹೂಳೆತ್ತಿದ ಬಳಿಕ ಗ್ರಾಪಂನ ಆದಾಯ ಹೆಚ್ಚಿಸುವ ಸಲುವಾಗಿ ಆ ಕೆರೆಗಳಲ್ಲಿ ಮೀನು ಸಾಕಣೆ ಮಾಡುವ ಉದ್ದೇಶವೂ ಇದೆ. ಕೆರೆಯ ಸುತ್ತ ಒತ್ತುವರಿ ತೆರವುಗೊಳಿಸಿ ಬೇಲಿ ನಿರ್ಮಿಸಿ ಭದ್ರಪಡಿಸುವುದರೊಂದಿಗೆ ಪಾರ್ಕ್ ನಿರ್ಮಾಣ ಮಾಡಿ ಸಮಗ್ರ ಅಭಿವೃದ್ಧಿಗಾಗಿ ತಲಾ ಅಂದಾಜು 1 ಕೋಟಿ ರೂ. ವೆಚ್ಚದ ಯೋಜನಾ ವರದಿ ತಯಾರಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಬರೆದು ಕಳುಹಿಸಲು ಸಿದ್ಧತೆ ನಡೆದಿದೆ.

    ಕಬಳಿಕೆ ಸಂಚು ವಿಫಲ: ಹಳೇ ಸ್ಟೇಶನ್‌ನ ಪೊಟ್ಟುಕೆರೆಯ ಪರಂಬೋಕು ಪ್ರದೇಶವನ್ನು ಪಹಣಿ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿ ಸರ್ಕಾರಿ ಜಮೀನು ಎಂದು ನಮೂದಿಸಿ ಅತಿಕ್ರಮಣ ಮಾಡಲು ನಡೆದಿದ್ದ ಹುನ್ನಾರವನ್ನು ಗ್ರಾಪಂನ ನಿರಂತರ ಪ್ರಯತ್ನದಿಂದಾಗಿ ವಿಫಲಗೊಳಿಸಲಾಗಿದೆ. 2 ವರ್ಷದ ಹಿಂದೆ ಕುಟ್ರುಪ್ಪಾಡಿ ಗ್ರಾಮದ ಸರ್ವೇ ನಂ.40ರಲ್ಲಿ ಇರುವ ಹಳೇ ಸ್ಟೇಶನ್‌ನ ಪೊಟ್ಟುಕೆರೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾಹಿತಿ ಪಡೆದಾಗ ಈ ಹಿಂದೆ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವ ಜಾಗವನ್ನು ಸರ್ಕಾರಿ ಜಾಗ ಎಂದು ದಾಖಲಿಸಿ ಕೆರೆಯನ್ನು ಖಾಸಗಿ ಉದ್ದೇಶಕ್ಕೆ ಬಳಸುವ ಸಂಚು ಬೆಳಕಿಗೆ ಬಂದಿತ್ತು. ಹಳೆಯ ಕೈಬರಹದ ಪಹಣಿಪತ್ರದಲ್ಲಿ ಕೆರೆ ಪರಂಬೋಕು ಎಂದು ನಮೂದಾಗಿರುವುದನ್ನು ಅಕ್ರಮವಾಗಿ ತಿದ್ದಿ ಸರ್ಕಾರಿ ಜಮೀನು ಎಂದು ತಿದ್ದುಪಡಿ ಮಾಡಲಾಗಿತ್ತು. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದ ಗ್ರಾಪಂ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿ ಸತತ 2 ವರ್ಷಗಳ ಪ್ರಯತ್ನದ ಬಳಿಕ ಪಹಣಿ ಪತ್ರ ಸರಿಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದರು.

    ಗ್ರಾಮದ ವ್ಯಾಪ್ತಿಯ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಅಂತರ್ಜಲಮಟ್ಟ ಏರಿಕೆಯಾಗಲು ಪ್ರಯತ್ನಿಸಬೇಕೆನ್ನುವ ಸೂಚನೆ ಸರ್ಕಾರದಿಂದ ಇದೆ. ನೀರಿನ ಬರ ಹೋಗಲಾಡಿಸಲು ಕೆರೆಗಳ ಪುನರುಜ್ಜೀವನ ಅತ್ಯಗತ್ಯ. ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಂರಕ್ಷಣೆ ಮಾಡಬೇಕೆನ್ನುವ ಉದ್ದೇಶದಿಂದ ಕಾರ್ಯಯೋಜನೆ ರೂಪಿಸಿದ್ದೇವೆ. ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರ ಅಗತ್ಯ.
    ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕುಟ್ರುಪ್ಪಾಡಿ ಪಿಡಿಒ

    ನಮ್ಮ ಹಿರಿಯರು ಕೆರೆಯನ್ನು ನೀರಿನ ಮೂಲವನ್ನಾಗಿಸಿಕೊಂಡಿದ್ದರು. ಕಾಲಕ್ರಮೇಣ ಕೆರೆಗಳು ಹೂಳೆತ್ತದೆ ಕಾಲಗರ್ಭದಲ್ಲಿ ಮರೆಯಾಯಿತು. ಈಗ ಅಂತಹ ಕೆರೆಗಳನ್ನು ಅಭಿವೃದ್ಧಿಪಡಿಸುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಕೆರೆಗಳಿಗೆ ಮತ್ತೆ ಜೀವಕಳೆಯನ್ನು ತರಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪ್ರಯತ್ನಕ್ಕೆ ಕೈ ಹಾಕಿದೆ. ಎಲ್ಲರ ಸಕಾರಾತ್ಮಕ ಸ್ಪಂದನೆ ಅಗತ್ಯವಿದೆ.
    ವಿದ್ಯಾಕಿರಣ್ ಗೋಗಟೆ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts