More

    ಸ್ಟಾರ್​ಗಳು ಅಖಾಡಕ್ಕೆ; 28ರಿಂದ ಲಗಾಮ್, ಶಿವಪ್ಪ ಶೂಟಿಂಗ್

    ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಆಗುತ್ತಿದ್ದಂತೆ ಸಿನಿಮಾ ವಲಯದ ಚಟುವಟಿಕೆಗಳು ಗರಿಗೆದರಿವೆ. ಇಷ್ಟು ದಿನ ಶೂಟಿಂಗ್ ಕೈಬಿಟ್ಟಿದ್ದ ಚಿತ್ರತಂಡಗಳು ಮತ್ತೆ ಚಿತ್ರೀಕರಣಕ್ಕೆ ಹೊರಟು ನಿಂತಿವೆ. ಆ ಪೈಕಿ ಸ್ಯಾಂಡಲ್​ವುಡ್​ನಲ್ಲಿ ನಟ ಉಪೇಂದ್ರ ‘ಲಗಾಮ್ ಸಿನಿಮಾ ಶೂಟಿಂಗ್​ಗೆ ಭರದ ಸಿದ್ಧತೆ ನಡೆಯುತ್ತಿದ್ದು, ಕರೊನಾ ಎರಡನೇ ಅಲೆ ಬಳಿಕ ಸೆಟ್ಟೇರುತ್ತಿರುವ ಮೊದಲ ದೊಡ್ಡ ಮತ್ತು ಹೊಸ ಚಿತ್ರವಾಗಲಿದೆ. ಲಾಕ್​ಡೌನ್​ಗೂ ಮುನ್ನ ಶುರುವಾದ ಕೆ. ಮಾದೇಶ್ ನಿರ್ದೇಶನದ ‘ಲಗಾಮ್ ಚಿತ್ರವು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ಕೊನೆಯಲ್ಲೇ ಪ್ರಾರಂಭವಾಗಿ, ಇಷ್ಟರಲ್ಲಿ ಬಹುಪಾಲು ಕೆಲಸಗಳನ್ನು ಮುಗಿಸಿರಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಇದೀಗ ಕಾಲ ಕೂಡಿಬಂದಿದ್ದರಿಂದ, ಮುಂದಿನ ವಾರ ಅಂದರೆ 28ರಿಂದ ಶೂಟಿಂಗ್ ಶುರುವಾಗಲಿದೆ. ‘ಲಗಾಮ್ ಚಿತ್ರದಲ್ಲಿ ಉಪೇಂದ್ರಗೆ ಮೊದಲ ಬಾರಿ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದು, ಅಷ್ಟೇ ವಿಭಿನ್ನ ಪಾತ್ರವನ್ನೂ ಅವರು ನಿಭಾಯಿಸಲಿದ್ದಾರೆ. ಆ ಬಗ್ಗೆ ಮಾತನಾಡುವ ನಿರ್ದೇಶಕ ಮಾದೇಶ್, ‘ಹರಿಪ್ರಿಯಾ ‘ಲಗಾಮ್​ನಲ್ಲಿ ತನಿಖಾ ಪತ್ರಕರ್ತೆಯಾಗಿ ನಟಿಸುತ್ತಿದ್ದಾರೆ. 28ರಿಂದ ಶುರುವಾಗುವ ಶೂಟಿಂಗ್​ನಲ್ಲಿ ಉಪೇಂದ್ರ ಅವರ ಜತೆ ಹರಿಪ್ರಿಯಾ ಸಹ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿಯೇ ಚಿತ್ರಕ್ಕಾಗಿ ಎರಡು ಸೆಟ್​ಗಳನ್ನು ನಿರ್ವಿುಸಲಾಗಿದೆ. ಮೊದಲ ಹಂತವಾಗಿ 25 ದಿನ, ಅದಾದ ಬಳಿಕ ಮೈಸೂರಿನಲ್ಲಿ ಚಿತ್ರೀಕರಣ ಮುಂದುವರೆಯಲಿದೆ. ಆ ನಂತರ ವಿದೇಶದಲ್ಲೂ ಚಿತ್ರೀಕರಣ ಮಾಡಲಿದ್ದೇವೆ’ ಎನ್ನುತ್ತಾರೆ. ಚಿತ್ರಕ್ಕೆ ಎಂ.ಆರ್ ಗೌಡ ಬಂಡವಾಳ ಹೂಡಲಿದ್ದು, ರಂಗಾಯಣ ರಘು, ಸಾಧು ಕೋಕಿಲ ಸೇರಿ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ರಾಜೇಶ್ ಕಟ್ಟಾ ಛಾಯಾಗ್ರಹಣ, ಸಾಧು ಕೋಕಿಲ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರ ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿಯಲ್ಲಿಯೂ ಡಬ್ ಆಗಿ ತೆರೆಗೆ ಬರಲಿದೆ.

    ಕಬ್ಜ ಸೆಟ್ ಕೆಲಸ ಶುರು: ಆರ್. ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಸಹ ಸದ್ದಿಲ್ಲದೆ ಶೂಟಿಂಗ್​ಗೆ ಅಣಿಯಾಗುತ್ತಿದೆ. ಈಗಾಗಲೇ ಸೆಟ್ ಕೆಲಸ ಭರದಿಂದ ಸಾಗಿದ್ದು, ‘ಲಗಾಮ್ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಬಳಿಕ ‘ಕಬ್ಜ’ ಬಳಗ ಸೇರಲಿದ್ದಾರೆ ಉಪೇಂದ್ರ.

    ಶೂಟಿಂಗ್​ಗೆ ಶಿವಣ್ಣ ಸಿದ್ಧತೆ: ನಿರ್ದೇಶಕ ವಿಜಯ್ ಮಿಲ್ಟನ್ ಜತೆಗೆ ‘ಶಿವಪ್ಪ’ ಸಿನಿಮಾದಲ್ಲಿ ನಟಿಸುತ್ತಿದ್ದ ಶಿವರಾಜ್​ಕುಮಾರ್, ಎರಡು ತಿಂಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು, ಜೂ. 28ರಂದು ಬಾಕಿ ಉಳಿದ ದೃಶ್ಯಗಳ ಶೂಟಿಂಗ್ ಶುರುವಾಗಲಿದೆ. ಜು. 12ಕ್ಕೆ ಶಿವಣ್ಣ ಜನ್ಮದಿನದ ಪ್ರಯುಕ್ತ ಅಧಿಕೃತ ಶೀರ್ಷಿಕೆ ಅನಾವರಣವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts