More

    ಶತಮಾನ ಕಳೆದರೂ ಕಾಡುವ ಕುವೆಂಪು : ಡಾ.ಎಲ್. ಹನುಮಂತಯ್ಯ ಅಭಿಮತ

    ಬೆಂಗಳೂರು: ಶತಮಾನ ಕಳೆದರೂ ನಮ್ಮನ್ನು ಕಾಡುವ ಕವಿ ಕುವೆಂಪು. ವಿಶ್ವಮಾನವ ಸಂದೇಶ ಹಾಗೂ ವೈಚಾರಿಕ ಚಿಂತನೆಗಳ ಕಾರಣಕ್ಕೆ ಸರ್ವಕಾಲಕ್ಕೂ ಅವರು ಆದರಣೀಯ ಎಂದು ಸಾಹಿತಿ ಡಾ.ಎಲ್. ಹನುಮಂತಯ್ಯ ಹೇಳಿದ್ದಾರೆ.

    ಕನ್ನಡ ನುಡಿಹಬ್ಬ ಅಂಗವಾಗಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಇತ್ತೀಚೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕದಂಬ ರತ್ನ ಪ್ರಶಸ್ತಿ ಪ್ರದಾನ, ರಾಜ್ಯಮಟ್ಟದ ಕಾವ್ಯೋತ್ಸವ ಮತ್ತು ನೃತ್ಯ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದರು. ಕುವೆಂಪು ನಂತರ ಕನ್ನಡದಲ್ಲಿ ಹಲವಾರು ಸಾಹಿತಿಗಳು ಬಹಳಷ್ಟು ಕೃತಿಗಳನ್ನು ರಚಿಸಿದ್ದಾರೆ, ದೊಡ್ಡ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ, ಅವರ‌್ಯಾರು ಕುವೆಂಪು ರೀತಿ ಜನಮನದಲ್ಲಿ ಉಳಿಯಲಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಕುವೆಂಪು ದೃಷ್ಟಿಕೋನದ ಕಾರಣದಿಂದ ಸದಾ ಸ್ಮರಣೆಗೆ ಅರ್ಹರು ಎಂದರು.

    ಭಾರತೀಯರು ಧರ್ಮಶಾಸ್ತ್ರಗಳಲ್ಲಿ, ಆಚಾರ-ವಿಚಾರದಲ್ಲಿ ಸದಾ ಮುಂದು. ಇಲ್ಲಿ ಪೂಜೆಗೊಳ್ಳುವಷ್ಟು ದೈವಗಳು ಪ್ರಪಂಚದಲ್ಲಿ ಎಲ್ಲೂ ಇಲ್ಲ. ಆದರೆ ಈ ದೈವಗಳು, ಧರ್ಮಶಾಸ್ತ್ರಗಳು ಮೇಲುಕೀಳು, ಅಸಮಾನತೆಯನ್ನು ಹೇಳುವುದರಿಂದ ಜನರಿಗೆ ಸಮಾನತೆಯ ಪಾಠ ಹೇಳುವವರು ಯಾರು? ಅದಕ್ಕೆ ಕುವೆಂಪು ‘ನೂರು ದೇವರುಗಳ ನೂಕಾಚೆ ದೂರ ಭಾರತಾಂಬೆಯ ಪೂಜಿಸುವ ಬಾರಾ’ ಎಂದು ನೇರವಾಗಿ ಹೇಳಿದರು. ರಾಜಕಾರಣಿಗಳು ಧರ್ಮ, ದೇವರ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಹೇಳಿದರು.

    ಸಾಹಿತಿ ಡಾ.ಡಿ.ಕೆ. ಚಿತ್ತಯ್ಯ ಪೂಜಾರ್, ಜಲಸಂಪನ್ಮೂಲ ಇಲಾಖೆ ಅಭಿಯಂತರ ಸಿ.ಪುನೀತ್, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಗಿರಿಯಪ್ಪ, ಪತ್ರಕರ್ತ ಎಂ.ಎಚ್. ಸುನೀಲ್ ಅವರಿಗೆ ‘ಕದಂಬ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದೇ ವೇಳೆ ಕವಿ ಮತ್ತು ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಕಾವ್ರೋತ್ಸವ ಹಾಗೂ ನೃತ್ಯ ಪ್ರದರ್ಶನ ನಡೆಯಿತು.

    ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ.ಪಿ. ರಾಮಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ, ಕವಿ ಹಾಗೂ ಸಂಘಟಕ ಟಿ. ಸತೀಶ್ ಜವರೇಗೌಡ, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಟಿ. ಸುರೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ.ಡಿ.ಕೆ. ಉಷಾ, ಡಾ. ಕಾಂತರಾಜಪುರ ಸುರೇಶ್ ಇತರರು ಕಾರ್ಯಕ್ರಮದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts