More

    ನರ ಸೇವೆಯೇ ದೇವರ ಪೂಜೆ

    ಉಡುಪಿ: ದೇವರ ಅನುಗ್ರಹಕ್ಕೆ ಪಾತ್ರರಾಗಲು ಸಮಾಜ ಸೇವೆ ಉತ್ತಮ ಮಾರ್ಗ. ನರ ಸೇವೆಯೇ ನಾರಾಯಣ ಸೇವೆ ಎಂದು ಕೇಂದ್ರ ಹಣಕಾಸು ಸಚಿವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
    ಶನಿವಾರ ಕುಕ್ಕಿಕಟ್ಟೆಯಲ್ಲಿ ಪೇಜಾವರ ಮಠದ ಆಡಳಿತದಲ್ಲಿರುವ ಶ್ರೀಕೃಷ್ಣ ಬಾಲನಿಕೇತನದಲ್ಲಿ ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಿದ ವಿಸ್ತೃತ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳು ಅನಾಥರಾಗಿರುವುದಿಲ್ಲ. ಆದರೆ ಅವಕಾಶ ವಂಚಿತರಾಗಿರುತ್ತಾರೆ. ಅಂಥವರ ಕಾಳಜಿ ವಹಿಸುವುದು ಅಗತ್ಯ. ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ದೇಶಾದ್ಯಂತ ಸಂಚಯಿಸಿ ಹಿಂದು ಧರ್ಮ ಪ್ರಚಾರದ ಜತೆಗೆ ಅಗತ್ಯವುಳ್ಳವರಿಗೆ ಬೇಕಾದ ಸಹಾಯವನ್ನು ಮಾಡಿದ್ದಾರೆ. ಈಗಿನ ಶ್ರೀಗಳು ಆ ಪರಂಪರೆ ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
    ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೃಷ್ಣನು ಗರ್ಭಗುಡಿಯಲ್ಲಿ ಮಾತ್ರವಲ್ಲ, ಸಮಾಜದ ಅನಾಥ ಮಕ್ಕಳಲ್ಲಿಯೂ ನೆಲೆಸಿದ್ದಾನೆ. ಆದ್ದರಿಂದ ಗುರುಗಳಾದ ವಿಶ್ವೇಶತೀರ್ಥರು ಈ ಸಂಸ್ಥೆ ಸ್ಥಾಪಿಸಿದ್ದರು. ಈ ಮಕ್ಕಳು ದಾರಿ ತಪ್ಪಬಾರದು. ಸಮಾಜ ಕಂಟಕರಾಗಬಾರದು. ಸಮಾಜದ ಆಸ್ತಿಯಾಗಬೇಕೆಂಬುದು ನಮ್ಮ ಕಾಳಜಿ ಎಂದರು.
    ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು. ಸೇವಾಧಾಮ ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ ಭಟ್ ಸ್ವಾಗತಿಸಿ, ಶ್ಯಾಮಲಾ ಪ್ರಸಾದ್ ನಿರೂಪಿಸಿದರು.

    ಎಜುಕೇಷನ್ ಹಬ್‌ಗೆ ಪ್ರಶಂಸೆ: ದ.ಕ.ಮತ್ತು ಉಡುಪಿ ಜಿಲ್ಲೆಗೆ ತನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ಸಚಿವೆ ನಿರ್ಮಲಾ, ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಜನರ ಒಡನಾಟ ವಿಶಿಷ್ಟ ಅನುಭವ ನೀಡುತ್ತದೆ ಎಂದರು. ಬ್ರಿಟಿಷರ ಕಾಲದಲ್ಲಿ ಇಲ್ಲಿನವರು ಉನ್ನತ ವಿದ್ಯಾಭ್ಯಾಸಕ್ಕೆ ಬೊಂಬೆ ಪ್ರೆಸಿಡೆನ್ಸಿ ಅಥವಾ ಚೆನ್ನೈಗೆ ತೆರಳಬೇಕಿತ್ತು. ಸ್ವಾತಂತ್ರೃ ಬಳಿಕ ಈ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರದ ಸಹಾಯ ನಿರೀಕ್ಷಿಸದೆ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಇದರ ಫಲವಾಗಿ ಇಂದು ಉಡುಪಿ, ಮಣಿಪಾಲ, ದ.ಕ. ದೇಶದ ಎಜುಕೇಶನ್ ಹಬ್ ಆಗಿದೆ. ಗುಣಮಟ್ಟದ ಶಿಕ್ಷಣಕ್ಕೆ ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts