More

    ಬಫರ್‌ಡ್ಯಾಂ ಸ್ಥಳಾಂತರಿಸಿದರೆ ನೀರು ಹರಿಯಲು ಬಿಡಲ್ಲ ; ಶಾಸಕ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ; ರಸ್ತೆ ಕಾಮಗಾರಿಗೆ ಭೂಮಿಪೂಜೆ

    ಕೊರಟಗೆರೆ : ಎತ್ತಿನಹೊಳೆ ಯೋಜನೆಯ ಬಫರ್‌ಡ್ಯಾಂ ನಿರ್ಮಾಣದಲ್ಲಿ ರೈತರಿಗೆ ನ್ಯಾಯಯುತ ಪರಿಹಾರ ನೀಡುವ ಬದಲು ಜಲಾಶಯವನ್ನೇ ಸ್ಥಳಾಂತರಿಸುವ ಹುನ್ನಾರ ನಡೆದರೆ ತಾಲೂಕು ಮುಖಾಂತರ ಡ್ಯಾಂಗೆ ನೀರು ಹರಿಸಲು ಬಿಡುವುದಿಲ್ಲ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.

    ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ಕೆಸ್ತೂರಿನಲ್ಲಿ 3 ಕೋಟಿ ರೂ. ವೆಚ್ಚದ ಬೆಳ್ಳಾವಿ -ಕೆಸ್ತೂರು -ವಸಂತನರಸಾಪುರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಯಲು ಸೀಮೆಯ ಜನರಿಗೆ ಕುಡಿಯುವ ನೀರಿನ ಬವಣೆ ನೀಗಿಸಲು 13.5 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಈ ಯೋಜನೆ ಪ್ರಾರಂಭಗೊಂಡು ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಬೃಹತ್ ಬಫರ್‌ಡ್ಯಾಂ ನಿರ್ಮಾಣ ಮಾಡಲು ನೀಲಿನಕ್ಷೆ ತಯಾರಿಸಲಾಯಿತು ಎಂದರು.

    ಈ ಡ್ಯಾಂಗೆ ದೊಡ್ಡಬಳ್ಳಾಪುರ ತಾಲೂಕು, ಕೊರಟಗೆರೆ ತಾಲೂಕುಗಳ ವ್ಯಾಪ್ತಿಯ ತಲಾ 2,500 ಎಕರೆ ಭೂ ಪ್ರದೇಶ ಮುಳುಗಡೆಯಾಗಲಿದ್ದು, ಒಟ್ಟಾರೆ ರೈತರು 5,000 ಎಕರೆ ಜಮೀನು ಕಳೆದುಕೊಳ್ಳಲಿದ್ದಾರೆ. ನೋಂದಣಿ ಇಲಾಖೆಯ ದರ ಏನೇ ಇದ್ದರೂ ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಾನ ಪರಿಹಾರ ಕೊಡುವಂತೆ ಅಂದಿನಿಂದಲೂ ಒತ್ತಾಯಿಸಲಾಗುತ್ತಿದೆ. ಸಮ್ಮಿಶ್ರ ಸರ್ಕಾರವಿದ್ದಾಗಲೇ ಇದನ್ನು ಜಾರಿಗೆ ತಂದರೂ ಈಗಿನ ಸರ್ಕಾರ ಇದರ ಗೋಜಿಗೆ ಹೋಗಿಲ್ಲ. ರೈತರಿಗೆ ಸಮಾನ ಪರಿಹಾರ ನೀಡುವ ಬದಲು ದೊಡ್ಡಬಳ್ಳಾಪುರ ತಾಲೂಕಿಗೆ ಸಂಪೂರ್ಣ ಜಲಾಶಯವನ್ನೇ ಸ್ಥಳಾಂತರ ಮಾಡುವ ಹುನ್ನಾರ ನಡೆದಿದೆ. ಈ ರೀತಿ ನಡೆದರೆ ತಾಲೂಕಿನ ಹೆಚ್ಚಿನ ಭೂ ಪ್ರದೇಶ ಅಂತರ್ಜಲ ಮತ್ತು ತೇವಾಂಶ ಭೂಮಿಯಿಂದ ವಂಚಿತವಾಗಲಿದ್ದು, ಶೀಘ್ರವೇ ಸರ್ಕಾರ ಈ ಹುನ್ನಾರ ಕೈಬಿಟ್ಟು ರೈತರಿಗೆ ಸಮಾನ ಪರಿಹಾರ ನೀಡಬೇಕು. ಇಲ್ಲದಿದ್ದರೆ ಜಲಾಶಯಕ್ಕೆ ಹೋಗುವ ನೀರನ್ನೇ ತಡೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಎತ್ತಿನಹೊಳೆ ಯೋಜನೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ 200 ಕೋಟಿ ರೂಪಾಯಿಯನ್ನು ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಕುಮಾರಸ್ವಾಮಿ ನನ್ನ ಮನವಿ ಮೇರೆಗೆ ಬಿಡುಗಡೆಗೊಳಿಸಿದರು. ಸರ್ಕಾರ ಪತನವಾದ ಮೇಲೆ ಆ ಹಣವನ್ನು ಈಗಿನ ಸರ್ಕಾರ ಮರಳಿ ಪಡೆದು ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿದೆ. ಈ ರಸ್ತೆಯನ್ನು ಅಭಿವೃದ್ಧಿ ಮಾಡದಂತೆ ಗ್ರಾಮಾಂತರ ಮಾಜಿ ಶಾಸಕರು ಹಲವು ರೀತಿಯ ಕಿರಿಕಿರಿ ಉಂಟು ಮಾಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಜಿಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷೆ ರೇವತಿ, ಸದಸ್ಯರಾದ ಸೌಮ್ಯಾ, ಕಿರಣ್, ಮುಖಂಡರಾದ ದೇವರಾಜು, ಸಿದ್ದರಾಜು, ಮನೋಜ್ ಇದ್ದರು.

    ಕೆಸ್ತೂರು ಸೇರಿ ಕೋರ ಹೋಬಳಿಯ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬ್ರಹ್ಮಸಂದ್ರ ಕೆರೆಗೆ ಹೇಮಾವತಿ ನೀರು ಹರಿಸುವ ಕೆಲಸ ಮಾಡಲಾಗಿದೆ. ಯಾರು ಏನೇ ಟೀಕೆ ಮಾಡಿದರೂ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮತ್ತು ಜನಸೇವೆ ಮಾಡಲಾಗುವುದು.
    ಡಾ.ಜಿ.ಪರಮೇಶ್ವರ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts