More

    ಕೃಷಿ ಕಾಯಕಕ್ಕಿಳಿದ ಶಾಸಕಿ

    ಕಾರವಾರ: ಕೃಷಿಯತ್ತ ಯುವಜನತೆಯನ್ನು ಸೆಳೆಯಲು ಸ್ವತಃ ಶಾಸಕಿ ರೂಪಾಲಿ ನಾಯ್ಕ ಗದ್ದೆಗಿಳಿದಿದ್ದಾರೆ. ಟ್ರ್ಯಾಕ್ಟರ್​ನಿಂದ ಉಳುಮೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಅಂಕೋಲಾದ ವಂದಿಗೆಯಲ್ಲಿ 35 ಎಕರೆ, ಕಾರವಾರ ಹಳಗಾದ ಧೋಲ್​ನಲ್ಲಿ 15 ಹಾಗೂ ದೇವಳಮಕ್ಕಿಯಲ್ಲಿ 15 ಎಕರೆ ಜಮೀನನ್ನು ಗೇಣಿ ಪಡೆದಿರುವ ಅವರು ಕೃಷಿ ಪ್ರಾರಂಭಿಸಿದ್ದಾರೆ. ಸ್ವತಃ ಟ್ರ್ಯಾಕ್ಟರ್, ನಾಟಿ ಯಂತ್ರ ಹಾಗೂ ಭತ್ತ ಕೊಯ್ಯುವ ಯಂತ್ರವನ್ನೂ ಖರೀದಿಸಿದ್ದಾರೆ. ಮುಂಗಾರು-ಹಿಂಗಾರು ಬೆಳೆಯಾಗಿ ಭತ್ತದ ಜತೆ ತರಕಾರಿ ಬೆಳೆಯಲು ಯೋಜನೆ ರೂಪಿಸಿದ್ದಾರೆ. ಅಷ್ಟೇ ಅಲ್ಲ ಕಾರವಾರದ ನಿವಳಿಯಲ್ಲಿ ಸುಮಾರು 15 ಹಸುಗಳ ಡೇರಿ ನಿರ್ವಣಕ್ಕೆ ಸಿದ್ಧತೆ ನಡೆಸಿದ್ದಾರೆ.

    ಇದೇಕೆ..?: ಕಾರವಾರದಲ್ಲಿ ಸಾಕಷ್ಟು ಕೃಷಿ ಭೂಮಿ ಇದ್ದರೂ ಬಂಜರು ಬಿದ್ದಿದೆ. 10 ವರ್ಷದ ಹಿಂದೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ನಾಟಿಯಾಗುತ್ತಿತ್ತು. ಈಗ ಆ ಪ್ರದೇಶ 1200 ಹೆಕ್ಟೇರ್​ಗೆ ಇಳಿದಿದೆ. ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಗದ್ದೆಗಳಿಗೆ ನುಗ್ಗುವ ಉಪ್ಪು ನೀರು, ಕೃಷಿ ಕೂಲಿಯಾಳುಗಳ ಕೊರತೆ, ತುಂಡು ಭೂಮಿ, ಕಾಡು ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಗೆ ಇಲ್ಲಿನ ಜನ ಕೃಷಿ ಮಾಡುವುದನ್ನು ಬಿಟ್ಟು ಬೇರೆ ಉದ್ಯೋಗ ಹುಡುಕುತ್ತಿದ್ದಾರೆ. 10-12 ಸಾವಿರ ರೂಪಾಯಿ ಮಾಸಿಕ ವೇತನಕ್ಕೆ ಪಕ್ಕದ ಗೋವಾ ರಾಜ್ಯದ ಫ್ಯಾಕ್ಟರಿಗಳಲ್ಲಿ ಉದ್ಯೋಗಕ್ಕೆ ತೆರಳುತ್ತಿದ್ದಾರೆ. ಕೃಷಿ ಲಾಭದಾಯಕವಲ್ಲ ಎಂದು ಇಲ್ಲಿನ ಜನರ ಮನದಲ್ಲಿ ಬಂದಿದೆ. ಆ ಮನಸ್ಥಿತಿಯನ್ನು ದೂರ ಮಾಡಲು ಶಾಸಕಿ ರೂಪಾಲಿ ನಾಯ್ಕ ಸ್ವತಃ ಕಾರ್ಯಪ್ರವೃತ್ತರಾಗಿದ್ದಾರೆ. ಕಳೆದ ವಾರ ಅಂಕೋಲಾ ತಾಲೂಕಿನ ವಂದಿಗೆಯಲ್ಲಿ ಸ್ವತಃ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ್ದರು. ಮಂಗಳವಾರ ಕಾರವಾರದ ದೋಲ್ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ನಂತರ ಸುಮಾರು ಅರ್ಧ ತಾಸು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.

    ಫಲವತ್ತತೆಯೆಡೆಗೆ ಮೊದಲ ಹೆಜ್ಜೆ: ಕಾರವಾರ-ಅಂಕೋಲಾ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಯತ್ನಿಸಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಧೋಲ್ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ಫಲವತ್ತತೆಯೆಡೆಗೆ ಮೊದಲ ಹೆಜ್ಜೆ’ ಎಂಬ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕೈಗಾ, ಸೀಬರ್ಡ್ ಮುಂತಾದ ದೊಡ್ಡ ಯೋಜನೆಗಳು ಕಾರವಾರಕ್ಕೆ ಬಂದಿದ್ದರು ಸ್ಥಳೀಯರಿಗೆ ಉದ್ಯೋಗ ಸಿಕ್ಕಿಲ್ಲ. ಇತ್ತೀಚೆಗೆ ಕಾರವಾರಕ್ಕೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಬಳಿ ಈ ಸಂಬಂಧ ಮಾತನಾಡಿದ್ದೇನೆ. ಸೀಬರ್ಡ್ ಎರಡನೇ ಹಂತದ ವಿಸ್ತರಣೆಯ ನಂತರ, ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಕೊಡಿಸಲು ಪ್ರಯತ್ನ ನಡೆದಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದರು.

    ಎರಡು ವರ್ಷದಲ್ಲಿ ಕರೊನಾದಿಂದ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅಂಥವರು ಅಧೀರರಾಗದೇ ಕೃಷಿ ಮಾಡಿದಲ್ಲಿ ಬೇಕಾದ ಸಹಕಾರ ನೀಡಲು ಸಿದ್ಧನಿದ್ದೇನೆ. ಕಾರವಾರದಲ್ಲೇ ಎಪಿಎಂಸಿ ಬಲವರ್ಧನೆ ಮಾಡಿ ಇಲ್ಲಿಯೇ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. ಅಕ್ಕಿ ಗಿರಣಿ ಪ್ರಾರಂಭಿಸಲಾಗುವುದು. ಇನ್ನು ಹಳಗಾ ಗ್ರಾಮದಲ್ಲಿ ರೈತರ ಸಂಘಟನೆ ಮಾಡಿ ಕೃಷಿ ಮಾಡಲು ತಾಂತ್ರಿಕ ಸಲಹೆ ಹಾಗೂ ಉತ್ತೇಜನ ನೀಡುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

    ಕೃಷಿ ಅಧಿಕಾರಿ ಜಿ.ಎನ್. ಗುಡಿಗಾರ, ಬಿಜೆಪಿ ಮುಖಂಡರಾದ ಸುಭಾಷ ಗುನಗಿ, ಸೂರ್ಯಪ್ರಕಾಶ ಬಿ.ಎನ್., ಉದಯ ಬಶೆಟ್ಟಿ, ದೇವಿದಾಸ ಬೇಳೂರಕರ್, ಯಶವಂತ ಉಂಡೇಕರ್, ಬಾಬು ನಾಯ್ಕ ಇತರರಿದ್ದರು.

    ನಾನು ಕೃಷಿ ಮಾಡಲು ಮುಂದಾದ ನಂತರ ಹಲವರು ಕರೆ ಮಾಡಿ ತಮ್ಮ ಜಮೀನನ್ನು ಪಡೆಯುವಂತೆ ಮನವಿ ಮಾಡುತ್ತಿದ್ದಾರೆ. ನಾನು ಸಾಧ್ಯವಾದಷ್ಟು ಜನರಿಗೆ ಸಹಕಾರ ಮಾಡಲಿದ್ದೇನೆ. ಕೃಷಿಯಲ್ಲಿ ಲಾಭವಿದೆ. ಸ್ವತಃ ಆಸಕ್ತಿ ತೋರಿ ಕೃಷಿಗೆ ಮುಂದಾಗಬೇಕು ಎಂದು ಪ್ರೇರೇಪಿಸುತ್ತಿದ್ದೇನೆ.

    ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts