More

    ಕೊರಗರಿಗೆ ಸರ್ಕಾರಿ ಭೂಮಿಯ ಹಕ್ಕುಪತ್ರ: ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ ಮನವಿ ಸಲ್ಲಿಕೆ


    ಕುಂದಾಪುರ: ತಾಲೂಕಿನ ಭೂ ರಹಿತ ಆದಿವಾಸಿಗಳಿಗೆ ಭೂಮಿ ಸಿಕ್ಕಿದರೆ ಕೃಷಿ ಮಾಡಿ, ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ. ಸರ್ಕಾರ ಭೂಮಿ ಆಧಾರಿತ ಯೋಜನೆ ಮಂಜೂರು ಮಾಡುತ್ತಿರುವುದರಿಂದ ಕೊರಗ ಸಮುದಾಯಕ್ಕೆ ಯಾವುದೇ ಯೋಜನೆ ಪ್ರಯೋಜನ ಸಿಗುತ್ತಿಲ್ಲ. ಪ್ರತಿ ತಾಲೂಕಿನಲ್ಲಿ ಭೂ ರಹಿತರ ಪಟ್ಟಿ ಮಾಡಿ ಭೂಮಿ ಸಿಗುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೊರಗರ ಅಭಿವೃದ್ಧಿ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಪುತ್ರನ್ ಹೇಳಿದರು.

    ಕುಂದಾಪುರ ತಾಲೂಕು ಕೊರಗ ಸಮುದಾಯದ ಕುಟುಂಬಗಳಿಗೆ ಸರ್ಕಾರಿ ಭೂಮಿಗೆ ಹಕ್ಕುಪತ್ರ ನೀಡುವಂತೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಶುಕ್ರವಾರ ಕುಂದಾಪುರ ಮಿನಿ ವಿಧಾನಸೌಧದಲ್ಲಿ ಉಪತಹಸೀಲ್ದಾರ್ ವಿನಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
    ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ್ ವಿ., ಸಮಗ್ರ ಗ್ರಾಮೀಣ ಆಶ್ರಮ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೊರಗ ಸಮುದಾಯದ ಪ್ರಮುಖರಾದ ಕುಮಾರದಾಸ್ ಹಾಲಾಡಿ, ಬೇಬಿ ವಂಡ್ಸೆ ಮೊದಲಾದವರು ಇದ್ದರು.

    ಕೊರಗ ಸಮುದಾಯದ ವಿಶೇಷ ಅಧ್ಯಯನ ಮಾಡಿರುವ ಡಾ.ಮಹಮ್ಮದ್ ಫೀರ್ ವರದಿಯಲ್ಲಿ ಕೊರಗರ ಇಂದಿನ ಪರಿಸ್ಥಿತಿಗೆ ಭೂಮಿಯನ್ನು ಹೊಂದದೇ ಇರುವುದು. ಕೃಷಿಕರಾಗಿರದೆ ಇರುವುದು ಕಾರಣ ಎಂದು ನಮೂದಾಗಿದೆ.
    ಕೊರಗ ಸಮುದಾಯದ ಪ್ರತಿ ಕುಟುಂಬಕ್ಕೆ ತಲಾ 2.5 ಎಕರೆ ಭೂಮಿ ನೀಡಿ ಮಾದರಿ ಕೃಷಿಕರಾಗುವಂತೆ ಮಾಡುವುದು ಅತ್ಯಗತ್ಯ ಎಂದು ಶಿಫಾರಸ್ಸು ಮಾಡಿತ್ತು. ಸರ್ಕಾರ ವರದಿ ಒಪ್ಪಿ ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ 1 ಎಕರೆ ಭೂಮಿ ಮಂಜೂರಾತಿ ಮಾಡಲಾರಂಭಿಸಿತು. ಪರಿಣಾಮ ಉಡುಪಿ ಜಿಲ್ಲೆಯಲ್ಲಿ 500 ಕುಟುಂಬಗಳಿಗೆ ಹಕ್ಕುಪತ್ರ ದೊರಕಿದ್ದು, ಕುಂದಾಪುರ ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ದೊರಕಿದೆ.

    ಕಂದಾಯ ಸಚಿವ ಆರ್.ಅಶೋಕ್ ಉಡುಪಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಕೆಂಜೂರು ಗ್ರಾಮದ ಕುಮಾರ್ ಮತ್ತು ಪಾರ್ವತಿರವರ ಮನೆಯಲ್ಲಿ ಬೆಳಗ್ಗಿನ ಉಪಹಾರ ಸೇವನೆ ಮಾಡಿ, ಸಾರ್ವಜನಿಕ ಸಭೆಯಲ್ಲಿ ಡೀಮ್ಡ್ ಅರಣ್ಯದಿಂದ ತೆರವಾದ ಭೂಮಿಯಲ್ಲಿ 1 ಸಾವಿರ ಎಕರೆ ಕಂದಾಯ ಭೂಮಿ ಕೊರಗ ಸಮುದಾಯದವರಿಗೆ ಹಕ್ಕುಪತ್ರ ನೀಡುವುದಾಗಿ ಘೋಷಣೆ ಮಾಡಿದರು. ಇದಕ್ಕೆ ಪೂರಕವಾಗಿ ಹಾಗೂ ಇದರ ಮುಂದುವರಿಕೆಯ ಪ್ರಕ್ರಿಯೆಯಾಗಿ ಸಂಘಟನೆಯ ವತಿಯಿಂದ ಕುಂದಾಪುರ ತಾಲೂಕಿನಲ್ಲಿ ಸಂಘಟನೆಯ ವಿಶೇಷ ಸಭೆಗಳು, ಗುಂಪು ಸಭೆಗಳು, ಕ್ಷೇತ್ರ ಕಾರ್ಯ ಮಾಡಿ ಭೂರಹಿತರಿಂದ ದರ್ಖಾಸು ಅರ್ಜಿ ಸಂಗ್ರಹಿಸಿ ಸಾಮೂಹಿಕವಾಗಿ ನೀಡಲಾಗಿದೆ. ಸರ್ಕಾರಿ ಭೂಮಿಯನ್ನು ಗುರುತಿಸುವ ಪ್ರಕ್ರಿಯೆ ಪ್ರಾರಂಭಿಸಿ ಕಾರ್ಯಬದ್ದ ಕ್ರಿಯಾ ಯೋಜನೆ ತಯಾರಿಸಿ ಮುಂದಿನ 3 ತಿಂಗಳಲ್ಲಿ ಹಕ್ಕುಪತ್ರ ಮಂಜೂರಾತಿಗಾಗಿ ಕ್ರಮ ಕೈಗೊಳ್ಳಲು ಸಂಘಟನೆ ಮನವಿ ಮಾಡಿದೆ.


    ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts