More

    ಕೊಪಣಾದ್ರಿಯಲ್ಲಿ ಸಂಭ್ರಮದ ಬೆಳ್ಳಿ ಬೆಡಗು

    ಕೊಪಣಾಚಲ ವೇದಿಕೆ, ಕೊಪ್ಪಳ:  ಜಿಲ್ಲೆಯಾಗಿ 25 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ರಜತ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.

    ನಗರದ ಹೊರವಲಯದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೆ.ಎಚ್.ಪಟೇಲರನ್ನು ನೆನೆಯಬೇಕು. ಐದು ಕ್ಷೇತ್ರಗಳನ್ನು ಒಳಗೊಂಡು ಕೊಪ್ಪಳವನ್ನು ಜಿಲ್ಲೆಯಾಗಿ ಘೋಷಿಸಿದರು. ಅನೇಕರ ಹೋರಾಟದ ಫಲವಾಗಿ ಜಿಲ್ಲೆಯಾಗಿದೆ. ಇಷ್ಟು ವರ್ಷಗಳಲ್ಲಿ ಅನೇಕ ಬದಲಾವಣೆ ಕಂಡಿದ್ದೇವೆ. ಬಹಳಷ್ಟು ಅಭಿವೃದ್ಧಿ ಆಗಿದೆ. ಜಿಲ್ಲೆಯ ಇತಿಹಾಸ ಶತಮಾನಗಳಷ್ಟು ಹಳೆಯದು. ಜೈನ ಕಾಶಿ, ಗಂಗರು, ರಾಷ್ಟ್ರಕೂಟರು ಸೇರಿ ಅನೇಕರು ಆಳಿದ್ದಾರೆ. ಹಲವು ಋಷಿಮುನಿಗಳು ಓಡಾಡಿದ ನಾಡಿನಲ್ಲಿ ನಾವು ಇರುವುದು ನಮ್ಮ ಪುಣ್ಯ. ಅಶೋಕನ ಶಿಲಾಶಾಸನ ಇರುವ ಪ್ರದೇಶ. ಗವಿಮಠ ಉತ್ತರ ಕರ್ನಾಟಕದ ತ್ರಿವಿಧ ದಾಸೋಹ ಕೇಂದ್ರ. ಕನಕಾಚಲ, ಮಹಾಮಾಯಿ, ಮಳೇಮಲ್ಲೇಶ್ವರದಂತಹ ಐತಿಹಾಸಿಕ ತಾಣಗಳಿವೆ. ತುಂಗಭದ್ರಾ ನದಿ ಹರಿಯುವ ನಾಡು. ಇನ್ನಷ್ಟು ಅಭಿವೃದ್ಧಿ ಆಗಬೇಕಿತ್ತು. ನಾನಾ ಕಾರಣಗಳಿಂದ ಆಗಿಲ್ಲ. ಮುಂದೆ ನಾವೆಲ್ಲ ಸೇರಿ ಅಭಿವೃದ್ಧಿ ಮಾಡೋಣ ಎಂದು ಸಚಿವರು ತಿಳಿಸಿದರು.

    ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ಜಿಲ್ಲೆಯಾಗಿ 25 ವರ್ಷವಾಗಿದೆ. 1997ರಲ್ಲಿ ಜಿಪಂ ಸದಸ್ಯನಿದ್ದೆ. ರಾಯಚೂರಿಗೆ ಹೋಗಬೇಕೆಂದರೆ ಎಂಟು ಗಂಟೆ ಪ್ರಯಾಣಿಸಬೇಕಿತ್ತು. ನಮ್ಮದು ಸಾಂಸ್ಕೃತಿಕ ಜಿಲ್ಲೆ. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ. ಇಂದ್ರಕಿಲ ಪರ್ವತವೇ ಇಂದಿನ ಮಳೇಮಲ್ಲೇಶ್ವರ. ಇಟಗಿ ಮಹಾದೇವ ದೇವಾಲಯ ದೇವಾಲಯಗಳ ಚಕ್ರವರ್ತಿ ಎಂಬುದು ಹೆಮ್ಮೆಯ ವಿಷಯ. ಆದರೆ, ಜಿಲ್ಲೆ ನಿರೀಕ್ಷಿತಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಕೊಪ್ಪಳ ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸಲಾಗುತ್ತಿದೆ. ರೈಲ್ವೆ, ಹೆದ್ದಾರಿ, ವಿಶ್ವವಿದ್ಯಾಲಯ, ಅಂಜನಾದ್ರಿ ಅಭಿವೃದ್ಧಿ ಮಾಡಲಾಗುತ್ತಿದೆ. ಯುವಕರು ಜಿಲ್ಲೆಯ ಅಭಿವೃದ್ಧಿ ಕನಸು ಕಾಣಬೇಕು. ರಜತ ಉತ್ಸವವನ್ನು ಎಲ್ಲರೂ ಹಬ್ಬದಂತೆ ಆಚರಿಸೋಣ ಎಂದರು.

    ಎಡಿಸಿ ಸಾವಿತ್ರಿ ಕಡಿ ಸ್ವಾಗತಿಸಿದರು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಜಿಲ್ಲೆಯ ಪರಿಚಯ ಮಾಡಿಕೊಟ್ಟರು. ರಜತ ಮಹೋತ್ಸವ ಅಂಗವಾಗಿ ಹೊರ ತಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್, ಡಿವೈಎಸ್ಪಿ ಶರಣಪ್ಪ ಸುಬೇದಾರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಎಸಿ ಬಸವಣ್ಣಪ್ಪ ಕಲಶೆಟ್ಟಿ, ತಹಸೀಲ್ದಾರ್ ಅಮರೇಶ ಬಿರಾದಾರ್ ಇತರರಿದ್ದರು.
    ಉಸ್ತುವಾರಿ ಆನಂದ ಸಿಂಗ್ ಗೈರು: ಜಿಲ್ಲೆ ಉಸ್ತುವಾರಿ ವಹಿಸಿಕೊಂಡಾಗಿನಿಂದಲೂ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಜಿಲ್ಲೆ ನಿರ್ಲಕ್ಷಿಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜಿಲ್ಲಾ ರಜತ ಮಹೋತ್ಸವ ಸಂಬಂಧ ನಡೆದ ಯಾವುದೇ ಸಭೆಯಲ್ಲಿ ಭಾಗವಹಿಸಲಿಲ್ಲ. ಅಲ್ಲದೇ ಉತ್ಸವದ ಅಂಗವಾಗಿ ಮೆರವಣಿಗೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದ್ದರೂ ಹಾಜರಾಗಲಿಲ್ಲ. ಕೊನೇ ಕ್ಷಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಉದ್ಘಾಟನೆ ನೆರವೇರಿಸಿದರು.

    10 ಕೆಪಿಎಲ್ ರವಿ 6
    ಕೊಪ್ಪಳದಲ್ಲಿ ಶುಕ್ರವಾರ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಸಚಿವ ಹಾಲಪ್ಪ ಆಚಾರ್ ಚಾಲನೆ ನೀಡಿದರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ಯಪುರ, ಪರಣ್ಣ ಮುನವಳ್ಳಿ, ಎಂಎಲ್ಸಿ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಎಡಿಸಿ ಸಾವಿತ್ರಿ ಕಡಿ, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts