More

    ಗವಿಮಠ ಭಕ್ತರಿಗೆ ಶಾಶ್ವತ ಸೌಕರ್ಯ : ಅಭಿನವ ಗವಿಶ್ರೀ ಪಣ; ಭರದಿಂದ ಸಾಗಿದೆ ಕೆಲಸ

    ಕೊಪ್ಪಳ: ಗವಿಮಠದ ಜಾತ್ರೆಗೆ ಸಿದ್ಧತೆ ಜೋರಾಗಿದ್ದು, ಬರುವ ಲಕ್ಷಾಂತರ ಭಕ್ತರಿಗೆ ಶಾಶ್ವತ ಮೂಲ ಸೌಕರ್ಯ ಕಲ್ಪಿಸಲು ಗವಿಶ್ರೀಗಳು ಮುಂದಾಗಿದ್ದಾರೆ. ಮಠದಲ್ಲಿ ಮಹಿಳೆಯರು, ಪುರುಷರು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಗೃಹ, ಮೂತ್ರಗೃಹ, ಕುಡಿವ ನೀರಿನ ವ್ಯವಸ್ಥೆ ಮಾಡುತ್ತಿದ್ದು, ರಥೋತ್ಸವ ವೇಳೆಗೆ ಪೂರ್ಣಗೊಳಿಸಲು ಪಣ ತೊಟ್ಟಿದ್ದಾರೆ.

    ಮಠದ ಆವರಣದಲ್ಲಿ ಕುಡಿವ ನೀರು ಇದ್ದರೂ ಶೌಚಗೃಹ, ಮೂತ್ರಗೃಹ ಸೌಲಭ್ಯವಿಲ್ಲ. ಗವಿಸಿದ್ಧೇಶ್ವರ ಕಾಲೇಜಿಗೆ ಹೊಂದಿಕೊಂಡು ಒಂದು ಶೌಚಗೃಹವಿದ್ದು, ಆಗಮಿಸುವ ಲಕ್ಷಾಂತರ ಭಕ್ತರಿಗೆ ಸಾಕಾಗುವುದಿಲ್ಲ. ಜಾತ್ರೆ ಅಲ್ಲದೇ ಸಾಮಾನ್ಯ ದಿನಗಳಲ್ಲೂ ಭಕ್ತರಿಗೆ ಸೌಕರ್ಯ ಅವಶ್ಯವಿರುವ ಕಾರಣ ಮಹಾದ್ವಾರದ ಬಲಭಾಗದಲ್ಲಿ ಮೂತ್ರಗೃಹ, ಶೌಚಗೃಹ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಹಿಳೆಯರು, ಪುರುಷರಿಗೆ ಏಕ ಕಾಲಕ್ಕೆ 60-70 ಜನರು ಬಳಕೆ ಮಾಡಲು ಅವಕಾಶವಿರುವಷ್ಟು ಜಾಗದಲ್ಲಿ ನಿರ್ಮಿಸಲಾಗುತ್ತಿದೆ.

    ಇದರೊಂದಿಗೆ ವಿಶ್ರಾಂತಿ ಗೃಹ, ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಅಂಗವಿಕಲರಿಗೆ ಅನುಕೂಲವಾಗಲು ರ‌್ಯಾಂಪ್ ರಚಿಸಲಾಗುತ್ತಿದೆ. ಪಾದರಕ್ಷೆ ಬಿಡುವ ಸ್ಥಳ, ಕಾಯಿ, ಕರ್ಪೂರ ಕೊಳ್ಳಲು ಅಂಗಡಿ, ಗದ್ದುಗೆ ದರ್ಶನ ಬಳಿಕ ದಾಸೋಹ ಮಂಪಟಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದ ನಂತರ ಹೊರ ಹೋಗಲು ಸರಳ ಮಾರ್ಗ ರಚಿಸಲಾಗುತ್ತಿದೆ. ಈಗಾಗಲೇ ಬಹುಪಾಲು ಕಾಮಗಾರಿ ಪೂರ್ಣಗೊಂಡಿದ್ದು, ಜಾತ್ರೋತ್ಸವ ವೇಳೆಗೆ ಭಕ್ತರ ಬಳಕೆಗೆ ನೀಡಲು ಅಭಿನವ ಗವಿಶ್ರೀಗಳು ಸಂಕಲ್ಪ ಮಾಡಿದ್ದಾರೆ.

    270 ಕ್ವಿಂಟಾಲ್ ಮಾದಲಿ ತಯಾರಿ: ಕೊಪ್ಪಳ ಗವಿಸಿದ್ಧೇಶ್ವರ ಗೆಳೆಯರ ಬಳಗದಿಂದ ಈ ವರ್ಷ ಮಹಾದಾಸೋಹಕ್ಕೆ 265 ರಿಂದ 270 ಕ್ವಿಂಟಾಲ್ ಸಿಹಿ ಮಾದಲಿ ಅರ್ಪಿಸಲು ಸಿದ್ಧತೆ ನಡೆಸಲಾಗಿದೆ. ಕೊಪ್ಪಳ, ಯಲಬುರ್ಗಾ ಹಾಗೂ ಇತರ ತಾಲೂಕಿನ 40-50 ಗ್ರಾಮಗಳ ಭಕ್ತರ ಸಹಕಾರದೊಂದಿಗೆ ಮಾದಲಿ ತಯಾರಿಸಲಾಗುತ್ತಿದೆ. 100 ಕ್ವಿಂಟಾಲ್ ಗೋದಿ, 150 ಕ್ವಿಂಟಾಲ್ ಬೆಲ್ಲ, 10 ಕ್ವಿಂಟಾಲ್ ಹುರಿದ ಗೋಧಿ ಹಿಟ್ಟು, 5 ಕ್ವಿಂಟಾಲ್ ಕಡ್ಲೆಬೇಳೆ, 50 ಕೆ.ಜಿ. ಶುಂಠಿ, 50 ಕೆ.ಜಿ. ಗಸಗಸೆ, 150 ಕೆ.ಜಿ. ಪುಟಾಣಿ, 50 ಕೆ.ಜಿ. ಕೊಬ್ಬರಿ, 20 ಕೆ.ಜಿ. ಯಾಲಕ್ಕಿ ಸೇರಿಸಿ ಸಿದ್ಧಪಡಿಸಲಾಗುತ್ತಿದೆ. 2023ರ ಜ.7ರಂದು ಗವಿಮಠಕ್ಕೆ ಅರ್ಪಿಸುವುದಾಗಿ ಗೆಳೆಯರ ಬಳಗದ ರಾಜು ಶೆಟ್ಟರ್ ತಿಳಿಸಿದ್ದಾರೆ. ಸೋಮವಾರ ಕಾಸನಕಂಡಿ ಗ್ರಾಮದ ಭಕ್ತರು ದವಸ-ಧಾನ್ಯ, ಟಣಕನಕಲ್ ಗ್ರಾಮದ ಭಕ್ತರು ಮೂರು ಸಾವಿರ ರೊಟ್ಟಿ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದರು.

    ಮಠಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಮಹಿಳೆಯರು, ಪುರುಷರಿಗಾಗಿ ಪ್ರತ್ಯೇಕ ಶೌಚಗೃಹ, ಮೂತ್ರಗೃಹ ಮುಂತಾದ ಸೌಕರ್ಯ ಕಲ್ಪಿಸಲಾಗುವುದು. ಜ.8ರಿಂದ ಜಾತ್ರೋತ್ಸವ ಇದ್ದು, ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಭಕ್ತರ ಸೇವೆಗೆ ನೀಡಲಾಗುವುದು.
    | ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts