More

    ಶೀಘ್ರವೇ ನೂತನ ಗಣಿ ನೀತಿ ಜಾರಿ

    ಕೊಪ್ಪಳ: ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಕಡಿಮೆ ಬೆಲೆಗೆ ಮರಳು ಮತ್ತು ಜಲ್ಲಿಕಲ್ಲು ಸಿಗುವಂತೆ ಮಾಡಲು ಸರ್ಕಾರ ಶೀಘ್ರವೇ ನೂತನ ಗಣಿ ನೀತಿ ಜಾರಿ ಮಾಡಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮನೆ ಕಟ್ಟುವ ಕನಸು ಹೊಂದಿರುವ ಪ್ರತಿಯೊಬ್ಬರಿಗೂ ಮರಳು ಮತ್ತು ಜಲ್ಲಿಕಲ್ಲು ಕಡಿಮೆ ಬೆಲೆಗೆ ಸಿಗಬೇಕು. ಹೊಸ ನೀತಿಯಲ್ಲಿ ಟ್ರ್ಯಾಕ್ಟರ್, ಎತ್ತಿನ ಬಂಡಿ, ದ್ವಿಚಕ್ರ ವಾಹನಗಳಲ್ಲಿ ಮರಳು ಸಾಗಣೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಬೇರೆ ಜಿಲ್ಲೆಗೆ ಸಾಗಿಸಲು ಅವಕಾಶ ನೀಡುವುದಿಲ್ಲ. ಸದ್ಯ ಇರುವ ಕಠಿಣ ನೀತಿಯಿಂದ ರಾಜ್ಯದಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಹೆಚ್ಚಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ನಿಯಂತ್ರಿಸಿದಷ್ಟು ಅಕ್ರಮ ಹೆಚ್ಚುತ್ತಿದೆ. ಉಚಿತವಾಗಿ ಮರಳು ಪಡೆಯುವಂತೆ ಮಾಡಿದಲ್ಲಿ ಇದರಿಂದ ಬಡವರೂ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗಲಿದೆ. ಕಲ್ಲು ಗಣಿಗಾರಿಕೆ ಮಾಡುವವರಿಗೆ ಇಲಾಖೆಯಿಂದ ಕಾರ್ಯಾಗಾರ ಆಯೋಜಿಲಾಗುತ್ತದೆ. ಗಣಿಗಾರಿಕೆ ಮಾಡುವ ರೀತಿ, ಬ್ಲಾಸ್ಟಿಂಗ್ ವೇಳೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ತಜ್ಞರು, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಕೊಪ್ಪಳದಲ್ಲಿ ಶೀಘ್ರವೇ ಕಾರ್ಯಾಗಾರ ನಡೆಸಿ ಎಂದು ಡಿಸಿಗೆ ಸೂಚಿಸಿದರು.

    ಗಂಗಾವತಿ ಭಾಗದಲ್ಲಿ ಕೈಗಳಿಂದ ಕಲ್ಲು ಒಡೆದು ಮಾರಾಟ ಮಾಡುವವರಿಗೆ ಅಧಿಕಾರಿಗಳು ಅನಗತ್ಯ ಸಮಸ್ಯೆ ಉಂಟುಮಾಡುತ್ತಿದ್ದಾರೆಂದು ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು. ಎಸಿ ನಾರಾಯಣರಡ್ಡಿ, ಪುರಾತತ್ವ ಇಲಾಖೆಯವರು ಐತಿಹಾಸಿಕ ಶಿಲೆಗಳಿರುವ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸದಂತೆ ಮನವಿ ಮಾಡಿದ ಕಾರಣ ನಿಲ್ಲಿಸಲು ಸೂಚಿಸಿರುವುದಾಗಿ ತಿಳಿಸಿದರು. ಸಮಸ್ಯೆ ಆಗದಂತೆ ಗಣಿಗಾರಿಕೆ ಮಾಡುವಂತೆ ಸಂಬಂಧಿಸಿದವರಿಗೆ ಸೂಚಿಸಿ. ಅಧಿಕಾರಿಗಳು ಸಣ್ಣ ಕೂಲಿಕಾರರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಸಚಿವರು ತಾಕೀತು ಮಾಡಿದರು. ಶಾಸಕ ಬಸವರಾಜ ದಢೇಸೂಗುರು, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಡಿಸಿ ಎಸ್.ವಿಕಾಸ್ ಕಿಶೋರ್, ಎಡಿಸಿ ಎಂ.ಪಿ.ಮಾರುತಿ, ಎಸ್ಪಿ ಟಿ.ಶ್ರೀಧರ್, ಕುಡಾ ಅಧ್ಯಕ್ಷ ಮಹಾಂತೇಶ ಪಾಟೀಲ್, ಹಿರಿಯ ಭೂ ವಿಜ್ಞಾನಿ ಪಿ.ಮುತ್ತಪ್ಪ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts