More

    ಜಂಟಿ ಸಮೀಕ್ಷೆ ನಡೆಸಿ ಹಾನಿ ವರದಿ ನೀಡಿ; ಕೊಪ್ಪಳ ಡಿಸಿ ಎಂ.ಸುಂದರೇಶ್ ಬಾಬು ಸೂಚನೆ

    ಕೊಪ್ಪಳ: ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ತ್ವರಿತವಾಗಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳ ಹಾಗೂ ಇನ್ಶೂರೆನ್ಸ್ ಕಂಪನಿಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಗಸ್ಟ್ ಮತ್ತು ಈ ತಿಂಗಳಲ್ಲಿ ನಿರಂತರ ಮಳೆಯಾಗಿದೆ. ಹೊಲಗಳಿಗೆ ನೀರು ಹರಿದು ಬೆಳೆ ಹಾನಿಯಾಗಿದೆ. ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಬೇಕಿದ್ದು, ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಜಂಟಿಯಾಗಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿ ತಹಸೀಲ್ದಾರರ ಮೂಲಕ ವರದಿ ನೀಡಬೇಕು.

    ಬಿತ್ತನೆಯಾದ ಬೆಳೆಗಳಲ್ಲಿ ರೋಗಬಾಧೆ ಬಗ್ಗೆಯೂ ವಿಶೇಷ ಕಾಳಜಿಯಿಂದ ಪರಿಶೀಲಿಸಬೇಕು. ನಿಯಂತ್ರಣ ಕ್ರಮಗಳ ಕುರಿತು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಮಾಹಿತಿ ನೀಡಬೇಕು. ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು ಕಾಳು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಆರು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಬಗ್ಗೆಯೂ ಮಾಹಿತಿ ನೀಡಬೇಕು. ಯೂರಿಯಾ, ಡಿಎಪಿ ಹಾಗೂ ಇತರ ರಸಗೊಬ್ಬರಗಳ ಲಭ್ಯತೆ ಕುರಿತು ರೈತ ಸಂಪರ್ಕ ಕೇಂದ್ರ, ಬೀಜ ಹಾಗೂ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೇಡಿಕೆಯನ್ವಯ ಜಿಲ್ಲೆಗೆ ಅವಶ್ಯವಿರುವ ರಸಗೊಬ್ಬರಗಳನ್ನು ನಿಗದಿತ ಅವಧಿಯೊಳಗೆ ತರಿಸಿಕೊಳ್ಳುವಂತೆ ತಿಳಿಸಿದರು.

    ಜಂಟಿ ಕೃಷಿ ನಿರ್ದೇಶಕ ಸದಾಶಿವ ಮಾತನಾಡಿ, ಕಳೆದ ವಾರ 2800 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಜಿಲ್ಲೆಗೆ ಬಂದಿದೆ. ಇನ್ನೂ 2500 ಮೆ.ಟನ್ ಭಾನುವಾರದೊಳಗೆ ಬರಲಿದೆ. ರಿಟೇಲರ್ ಮಾರಾಟಗಾರರಲ್ಲಿ 2361 ಮೆಟ್ರಿಕ್ ಟನ್ ಯೂರಿಯಾ, 656 ಡಿಎಪಿ, 7904 ಮೆಟ್ರಿಕ್ ಟನ್ ಕಾಂಪ್ಲೇಕ್ಸ್ ಗೊಬ್ಬರ ದಾಸ್ತಾನಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಹಾಗೂ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಇನ್ಶೂರೆನ್ಸ್ ಕಂಪನಿ ಪ್ರತಿನಿಧಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts