More

    ಪಬ್ಲಿಕ್ ಪರೀಕ್ಷೆ ಪ್ರಶ್ನೆಗಳಿಗೆ ಉತ್ತರಿಸಲು ಭಯಪಡುವ ಅಗತ್ಯವಿಲ್ಲ

    ಕೋಲಾರ: ವಿದ್ಯಾರ್ಥಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ ಎಂಬ ಆತಂಕ ಬೇಡ, ಎಲ್ಲ ಪರೀಕ್ಷೆಗಳೂ ಒಂದೇ. ಕಲಿಕೆಯಲ್ಲಿ ಯಶ ಸಾಧಿಸಿದ್ದರೆ ಪ್ರಶ್ನೆಗಳಿಗೆ ಉತ್ತರಿಸಲು ಭಯಪಡಬೇಕಿಲ್ಲ ಎಂದು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

    ತಾಲೂಕಿನ ಕೆಂಬೋಡಿ ಜನತಾ ಪ್ರೌಢಶಾಲೆ ಸಭಾಂಗಣದಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಗೊಂದಲ ನಿವಾರಿಸಲು ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ಸಿಗುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಬರವಣಿಗೆ ಉತ್ತಮವಾಗಿದ್ದರೆ, ಮೌಲ್ಯಮಾಪಕರು ಓದುವಂತಿದ್ದರೆ, ಅಂಕ ನೀಡಿಕೆಯಲ್ಲೂ ಅವರಲ್ಲಿ ಧಾರಾಳತನ ಇರುತ್ತದೆ ಎಂದರು.

    ಯುದ್ಧಕಾಲದಲ್ಲಿ ಶಸಾಭ್ಯಾಸ ಎನ್ನದೆ ಪರೀಕ್ಷೆಗೆ ಸಿದ್ಧತೆ ನಡೆಸಿ, ಗುಂಪು ಚರ್ಚೆ, ಸಂವಾದ, ಪುನರ್ಮನನದ ಮೂಲಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಪರೀಕ್ಷೆಗೆ ಖುಷಿಯಿಂದ ಹೋಗುವಂತಾಗಬೇಕು ಎಂದರು.
    ಈಗಾಗಲೆ ಶಾಲೆಗಳಲ್ಲಿ ಪಠ್ಯ ಮುಗಿಸಲಾಗಿದ್ದು, ಇಲಾಖೆಯ ಕ್ರಿಯಾ ಯೋಜನೆಯಂತೆ ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಲಾಗಿದೆ. ಶೇ.100 ಫಲಿತಾಂಶದ ಗುರಿಯೊಂದಿಗೆ ಸಾಧನೆ ಇರಲಿ. ಗುಣಾತ್ಮಕ ಅಂಕಗಳ ಆಧಾರದ ಮೇಲೆ ಜಿಲ್ಲೆಗೆ ರ‌್ಯಾಂಕ್ ನೀಡುವುದಾಗಿ ಸರ್ಕಾರ ಹೇಳುತ್ತಿರುವುದರಿಂದ ಉತ್ತಮ ಅಂಕ ಗಳಿಕೆಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

    ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ವಿಭಾಗಮಟ್ಟದಲ್ಲಿ ಸಾಮಾನ್ಯ ಪ್ರಶ್ನೆಪತ್ರಿಕೆ ನೀಡಿ ಮಕ್ಕಳಿಂದ ಬರೆಸುವ ಮೂಲಕ ಸರ್ಕಾರ ಸುಧಾರಣೆ ತಂದಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕ ಓದಲು ಆದ್ಯತೆ ನೀಡಬೇಕು ಎಂದರು.
    ಜನತಾ ಪ್ರೌಢಶಾಲೆ ಕಾರ್ಯದರ್ಶಿ ವಕೀಲ ಬಿಸಪ್ಪಗೌಡ ಮಾತನಾಡಿ, ಇದು ಮೊಬೈಲ್ ಯುಗ, ಇದರಿಂದ ಹೊರ ಬಂದು ಧ್ಯಾನ, ಯೋಗದ ಮೂಲಕ ಮನಸ್ಸನ್ನು ಕಲಿಕೆಯತ್ತ ಬಾಗಿಸಬೇಕು. ಶೇ.10ರಷ್ಟು ಮಾತ್ರ ಪ್ರೇರಣೆ, ಉಳಿದ ಶೇ.90 ರಷ್ಟು ಪರಿಶ್ರಮವಿದ್ದರೆ ಉತ್ತಮ ಅಂಕ ಗಳಿಕೆ ಸಾಧ್ಯ ಎಂದರು.

    ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಜಿಲ್ಲಾ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ಮುಖ್ಯಶಿಕ್ಷಕ ಸುಬ್ರಮಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts