More

    ಸರ್ಕಾರ ಮಾಡುವ ಕೆಲಸವನ್ನು ಕೆಎಲ್​ಇ ಮಾಡಿದೆ: ಪ್ರಭಾಕರ ಕೋರೆ ಅಮೃತ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ

    ಬೆಳಗಾವಿ: ಸ್ವಾತಂತ್ರ್ಯಪೂರ್ವ ಹಾಗೂ ನಂತರದಲ್ಲಿ ಕೆಎಲ್‌ಇ ಸಂಸ್ಥೆ ಇಲ್ಲದಿದ್ದರೆ, ಮುಂಬೈ ಕರ್ನಾಟಕದಲ್ಲಿ ಇಷ್ಟು ದೊಡ್ಡ ಪ್ರಮಾಣದ ಶಿಕ್ಷಣ ಸಂಸ್ಥೆ ತೆರೆಯದಿದ್ದರೆ, ದಾನಿಗಳು ದಾನ ಕೊಡದಿದ್ದರೆ, ಬಹುತೇಕವಾಗಿ ಮುಂಬೈ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಬೆಳೆಯುತ್ತಿರಲಿಲ್ಲ. ಈ ಭಾಗದ ಬಹುತೇಕ ನಾಯಕರು ಕೆಎಲ್​ಇ ಸೊಸೈಟಿ ವಿದ್ಯಾರ್ಥಿಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾವ ಕೆಲಸವನ್ನು ಸರ್ಕಾರ ಮಾಡಬೇಕಿತ್ತೋ ಅದನ್ನು ಕೆಎಲ್‌ಇ ಸೊಸೈಟಿ ಮಾಡಿದೆ ಎಂಬ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

    ಕೆಎಲ್​ಇ ಸೊಸೈಟಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಪ್ರಯುಕ್ತ ಇಂದು ಹಮ್ಮಿಕೊಳ್ಳಲಾಗಿದ್ದ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡ ಸಿಎಂ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ಪ್ರಭಾಕರ ಕೋರೆ ತಮ್ಮ ರಾಜಕೀಯ ಜೀವನ ತ್ಯಾಗ ಮಾಡಿ ಕೆಎಲ್‌ಇ ಸೊಸೈಟಿ ಕಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಶ್ಲಾಘಿಸಿದರು.

    ಒಬ್ಬ ವ್ಯಕ್ತಿಗೆ 75 ವರ್ಷ ತುಂಬಿದೆ ಎಂದರೆ ಅದು ಬದುಕಿನ ಆಯಾಮಗಳನ್ನು ಸಿಂಹಾವಲೋಕನ ಮಾಡುವ ಸಮಯ. ಪ್ರಭಾಕರ ಕೋರೆ ಅವರು ನಡೆದು ಬಂದ ದಾರಿ ಗಮನಿಸಿದಾಗ, ಸಣ್ಣ ವಯಸ್ಸಿನಲ್ಲಿ ಸೊಸೈಟಿಯ ನಿರ್ದೇಶಕ ಮಂಡಳಿ ಸದಸ್ಯರಾದರು. ಮುಂದೆ ಕೆಎಲ್‌ಇ ಅಧ್ಯಕ್ಷರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಸೊಸೈಟಿ ಎದುರಿಸುತ್ತಿತ್ತು. ಅವರು ಅಧ್ಯಕ್ಷರಾಗುವ ಪೂರ್ವದಲ್ಲಿ ಕೆಎಲ್‌ಇ ಮತ್ತು ಇತರೆ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಬೇಕೆಂಬ ಕಾರ್ಮೋಡದ ವಾತಾವರಣ ನಿಭಾಯಿಸಿದರು. ಎಲ್ಲ ಸವಾಲುಗಳನ್ನು ಎದುರಿಸಿ ಕೆ.ಎಲ್.ಇ ಸೊಸೈಟಿ ಪ್ರಗತಿ ಸಾಧಿಸುವಂತೆ ಮುನ್ನಡೆಸುವುದು ಸುಲಭವಾಗಿರಲಿಲ್ಲ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಂಸ್ಥೆಯನ್ನು ಬೆಳೆಸಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಹಲವಾರು ಟೀಕೆಗಳು, ನ್ಯಾಯಾಲಯದ ಪ್ರಕರಣಗಳು, ಅವಮಾನದ ಮಾತುಗಳು ಕೆಲಸ ಮಾಡಲು ಅವಕಾಶ ಇಲ್ಲದಿರುವ ಸನ್ನಿವೇಶವನ್ನು ನೋಡಿದಾಗಲೂ ಅವುಗಳನ್ನು ದಿಟ್ಟತನದಿಂದ ಎದುರಿಸಿ, ಬುದ್ಧಿಶಕ್ತಿಯಿಂದ ಕೆಎಲ್ಇ ಸಂಸ್ಥೆಯನ್ನು ಸರ್ವಸ್ವತಂತ್ರ ವಿಶ್ವವಿದ್ಯಾಲಯ ಮಾಡುವ ಮಟ್ಟಕ್ಕೆ ಡಾ.ಪ್ರಭಾಕರ ಕೋರೆ ಶ್ರಮ ವಹಿಸಿದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಕೆಎಲ್‌ಇ ಸೊಸೈಟಿ ಕಟ್ಟಲು ಕೋರೆ ಎಷ್ಟು ಶ್ರಮ ವಹಿಸಿದ್ದಾರೋ, ಅಷ್ಟು ಶ್ರಮ ರಾಜಕೀಯ ರಂಗಕ್ಕೆ ಕೊಟ್ಟಿದ್ದರೆ ಬಹಳ ದೊಡ್ಡ ರಾಜಕೀಯ ನಾಯಕ ಆಗುತ್ತಿದ್ದರು. ನಮ್ಮ ಭಾಗದ ಜನ, ಬಡವರು, ಗ್ರಾಮೀಣ ವರ್ಗದವರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದು ಅರಿತಿದ್ದ ಅವರು ಆಮೂಲಾಗ್ರ ಬದಲಾವಣೆ ತರಲು ಶಿಕ್ಷಣ ಮುಖ್ಯ. ನಾನೊಬ್ಬ ನಾಯಕನಾಗುವುದಕ್ಕಿಂತ ಹಲವಾರು ನಾಯಕರನ್ನು ಬೆಳೆಸೋಣ ಎಂದು ತಮ್ಮ ರಾಜಕೀಯ ಜೀವನ ತ್ಯಾಗ ಮಾಡಿ ಕೆಎಲ್‌ಇ ಸೊಸೈಟಿ ಬೆಳೆಸಿದರು ಎಂದರು.

    ಸರ್ಕಾರ ಮಾಡುವ ಕೆಲಸವನ್ನು ಕೆಎಲ್​ಇ ಮಾಡಿದೆ: ಪ್ರಭಾಕರ ಕೋರೆ ಅಮೃತ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ

    ಶೈಕ್ಷಣಿಕ ಕ್ರಾಂತಿ: ಕೆಎಲ್‌ಇ ಸೊಸೈಟಿ ಬೆಳೆದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಚ್ಚುವ ಹಂತದಲ್ಲಿ ಇದ್ದ ಶಿಕ್ಷಣ ಸಂಸ್ಥೆಗಳು ಕೆಎಲ್‌ಇ ಸಂಸ್ಥೆ ಬಳಿ ಬಂದು ಮುನ್ನಡೆಸಿ ಎಂದು ಕೇಳುತ್ತಿದ್ದರು. ತಮ್ಮ ಸಂಸ್ಥೆಯಲ್ಲಿ ಜಾತಿ, ಮತ, ಪಂಥ ನೋಡದೆ ಎಲ್ಲರಿಗೂ ಶಿಕ್ಷಣ ನೀಡಿದ್ದಾರೆ. ಡಾ. ಕೋರೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಬೆಂಗಳೂರಿನಲ್ಲೂ ಯಾವ ಸಂಸ್ಥೆಗೂ ಕಡಿಮೆ ಇಲ್ಲದಂತೆ ಕೆಎಲ್‌ಇ ಸಂಸ್ಥೆ ಕಟ್ಟಿದ್ದಾರೆ. ಶಿಕ್ಷಣ, ವೈದ್ಯಕೀಯ, ಕೃಷಿಯಲ್ಲಿ ಏನಾದರೂ ಹೊಸತನ ಬಂದಿದ್ದರೆ ಕೂಡಲೇ ತಮ್ಮ ಸಂಸ್ಥೆಯಲ್ಲಿ ಅದನ್ನು ಆರಂಭಿಸುತ್ತಾರೆ ಎಂದರು.

    ಸರ್ವರಂಗದಲ್ಲೂ ಸಾಧನೆ: ಪ್ರಭಾಕರ ಕೋರೆ ಅವರ ಸಾಧನೆ ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಎಲ್ಲ ರಂಗದಲ್ಲೂ ಸಾಧನೆ ಮಾಡಿದ್ದಾರೆ. ಒಬ್ಬ ವ್ಯಕ್ತಿಗೆ ರಾಜಕೀಯ ಶಕ್ತಿಯಿಂದ ಮಾತ್ರ ಬೆಳೆಯಬೇಕಾಗಿಲ್ಲ. ಬೆಳಗಾವಿಯಲ್ಲಿ ಕನ್ನಡ ಮೇಯರ್ ಆಯ್ಕೆ ಮಾಡಬೇಕಾದ ಸಂದರ್ಭದಲ್ಲಿ 19 ಎಂಇಎಸ್ ಸದಸ್ಯರ ಮತಗಳ ಅಗತ್ಯವಿತ್ತು. ಆಗ ಅದರ ಜವಾಬ್ದಾರಿ ಹೊತ್ತ ಕೋರೆಯವರು ಆ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಎಂಇಎಸ್ ಮತಗಳನ್ನು ಪಡೆಯತ್ತಾರೆ ಎಂದರೆ ಅವರ ಶಕ್ತಿ ಏನೆಂದು ಅಂದಾಜು ಮಾಡಬಹುದು ಎಂದರು.

    ಬುಲೆಟ್ ಮ್ಯಾನ್: ‘ದೇಹದೊಳಗೆ ಬುಲೆಟ್ ಇಟ್ಟುಕೊಂಡು ಅಷ್ಟು ಶಕ್ತಿಯಿಂದ ಓಡಾಡುತ್ತಿದ್ದರು. ಅವರಿಗೆ ನಾನು ಬುಲೆಟ್ ಮ್ಯಾನ್ ಎಂದು ಕರೆಯುತ್ತೇನೆ. ಅವರ ಮೇಲೆ ಗುಂಡು ಹಾರಿಸಲಾಗಿದ್ದ ಸಂದರ್ಭದಲ್ಲಿ ಭೇಟಿಯಾಗಿದ್ದೆ. ಆಗ ಬಸಣ್ಣ ನಾನು ಬದುಕಬಾರದಿತ್ತು. ಈಗ ಬದುಕಿ ಬಂದಿದೀನಿ, ಇದು ನನ್ನ ಪುನರ್ಜನ್ಮ. ನಾನೇದಾರೂ ಬದುಕಿದ್ರೆ ಕೆಎಲ್‌ಇ ಸೊಸೈಟಿಗಾಗಿ ಸಮಾಜಕ್ಕಾಗಿ ಎಂದಿದ್ದರು’ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಅದೇ ರೀತಿ ಡಾ.ಪ್ರಭಾಕರ್ ಕೋರೆ ಬದುಕುತ್ತಿದ್ದಾರೆ ಎಂದರು.

    ಈ ಸಂರ್ಭದಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಸಂಸದೆ ಮಂಗಳಾ ಸುರೇಶ್ ಅಂಗಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ , ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ.ಸಿ. ನಾಗೇಶ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಹಾಗೂ ಲಕ್ಷಣ ಸವದಿ, ಶಾಸಕ ಆರ್.ವಿ.ದೇಶಪಾಂಡೆ, ಉಪಸ್ಥಿತರಿದ್ದರು.

    ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts