ಉಜಿರೆ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ: ಕೋಲಾರದಲ್ಲಿ ಬಲೆಗೆ ಬಿದ್ದಿದ್ಹೇಗೆ ಅಪಹರಣಕಾರರು?

Ujire
Published on

ಮಂಗಳೂರು: ಉಜಿರೆ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಬಾಲಕನನ್ನು ರಕ್ಷಣೆ ಮಾಡಲಾಗಿದ್ದು, ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸೈನಿಕ ಶಿವನ್​ ಪುತ್ರ ಬಿಜೋಯ್ ಎಂಬುವರ 8 ವರ್ಷದ ಮಗ ಅನುಭವ್​ನನ್ನು ಅಪಹರಿಸಲಾಗಿತ್ತು. ಮಾಜಿ ಸೈನಿಕ ಶಿವನ್ ಓರ್ವ ದೊಡ್ಡ ಉದ್ಯಮಿ. ಗುರುವಾರ ಸಂಜೆ 6.30ರ ಸುಮಾರಿಗೆ ಅನುಭವ್​ನನ್ನು ಹಳದಿ ಪ್ಲೇಟ್ ನಂಬರ್​ನ ಇಂಡಿಕಾ ಕಾರ್​ನಲ್ಲಿ ಅಪಹರಿಸಲಾಗಿತ್ತು. ಬಿಜೋಯ್ ಹಾರ್ಡ್​ವೇರ್ ವ್ಯವಹಾರಸ್ಥರಾಗಿದ್ದಾರೆ. ನಿನ್ನೆ ಬಿಜೋಯ್ ಪತ್ನಿ ಸರಿಯಾ ಬಿಜೋಯ್ ಗೆ ಕರೆ ಮಾಡಿ 17 ಕೋಟಿ ರೂಪಾಯಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ತೀವ್ರ ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್​ ತಂಡ ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ಸದ್ಯ ಆರೋಪಿಗಳನ್ನು ಮಾಸ್ತಿ ಠಾಣೆಯಲ್ಲಿ ಬಂಧಿಸಿಡಲಾಗಿದೆ.

ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಮನೆಯೊಂದರಲ್ಲಿ ಮಗುವನ್ನು ಇರಿಸಿದ್ದರು. ಕೋಲಾರ ಪೊಲೀಸ್​ ಎಸ್ಪಿ ಕಾರ್ತಿಕ್ ರೆಡ್ಡಿ‌ ನೆರವಿನಿಂದ ಮಂಗಳೂರು ಪೊಲೀಸ್ ವಿಶೇಷ ತಂಡ ಅಪಹರಣಕಾರರನ್ನು ಬಂಧಿಸಿದೆ. ಮಂಡ್ಯ ಮೂಲದ ಗಂಗಾಧರ್ ಹಾಗೂ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಕೋಮಲ್ ಸೇರಿ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ.

ಅಪಹರಣಕಾರರಿಗೆ ಸಹಕಾರ ನೀಡಿದ್ದ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮಹೇಶ್ ಸಹ ‌ಬಂಧನವಾಗಿದ್ದಾರೆ. ಕಿಡ್ನ್ಯಾಪ್​ ಮಾಡಿದ ತಂಡದ ಕೋಮಲ್ ಹಾಗೂ ಮಹೇಶ್ ಸ್ನೇಹಿತರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ಯಾಂಕರ್ ಡ್ರೈವರ್ ಆಗಿದ್ದ ಮಹೇಶ್​ಗೆ ಕೋಮಲ್ ‌ಪರಿಚಯ. ಕಳೆದ‌ ರಾತ್ರಿಯಷ್ಟೇ‌ ಕೋಲಾರದ ಕೂರ್ನಹೊಸಳ್ಳಿ ಗ್ರಾಮಕ್ಕೆ ಮಗುವಿನೊಂದಿಗೆ ಬಂದಿದ್ದರು. ಈ ವೇಳೆ ಮಂಜುನಾಥ್ ಎಂಬುವರ‌ ಮೊಬೈಲ್ ಬಳಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net