More

    ಚಿಕ್ಕದಿನ್ನಿಗ್ರಾಮದಲ್ಲಿ ಬಿಗುವಿನ ವಾತಾವರಣ, ಮನೆ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದ

    ಕವಿತಾಳ: ಗೈರಾಣಿ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತವಾಗಿದ್ದು, ಚಿಕ್ಕದಿನ್ನಿಗ್ರಾಮದ ವಾತಾವರಣ ಗುರುವಾರ ಬೂದಿಮುಚ್ಚಿದ ಕೆಂಡದಂತಾಗಿದ್ದು, ಗ್ರಾಮಸ್ಥರು ಮನೆಯಿಂದ ಹೊರಬರದಂತಾಗಿದೆ.

    ಅಗಸಿ ಬಳಿಯ ಪುರಾತನ ಬಾವಿ ಪಕ್ಕದಲ್ಲಿ ತಿಮ್ಮಣ್ಣ ಮಡಿವಾಳ ಎನ್ನುವವರು ಬಹು ವರ್ಷದಿಂದ ವಾಸವಾಗಿದ್ದರು. ಕೆಲದಿನಗಳ ಹಿಂದೆ ಪಂಚಾಯಿತಿಯಿಂದ ಜನತಾ ಮನೆ ಮಂಜೂರು ಆಗಿತ್ತು. ಆದರೆ, ತಿಮ್ಮಣ್ಣ ಗೈರಾಣಿ ಸ್ಥಳದಲ್ಲಿ ಮನೆಯನ್ನು ನಿರ್ಮಿಸಲು ಮುಂದಾಗಿದ್ದು, ಗ್ರಾಮಸ್ಥರ ಕೆಂಗಣ್ಣಿಗೆ ಕಾರಣವಾಯಿತು. ಇದರಿಂದ ಕೋಪಗೊಂಡ ಗ್ರಾಮಸ್ಥರು ಗೈರಾಣಿ ಸ್ಥಳದಲ್ಲಿ ತಿಮ್ಮಣ್ಣ ವಾಸವಾಗಿರಲಿ ಆದರೆ, ಅಲ್ಲಿಯೇ ಮನೆಯನ್ನು ಕಟ್ಟಿದರೆ ಸಮಸ್ಯೆಯಾಗುತ್ತದೆ.ಕೂಡಲೇ ಕಟ್ಟಡ ನಿರ್ಮಾಣ ನಿಲುಗಡೆಗೆ ಕ್ರಮವಹಿಸಬೇಕೆಂದು ಗ್ರಾಮಸ್ಥರಾದ ಯಮನೂರು, ಮೌಲಸಾಬ್, ಅಂಬಣ್ಣ ನಾಯಕ, ಬಸವರಾಜಗೌಡ, ಬಸಪ್ಪ ಹೀರಾ, ಕೆಮ್ಮಣ್ಣ, ಹನುಮಂತ ಪೂಜಾರಿ, ಮಲ್ಲಯ್ಯ ಕುರಬರ ಸೇರಿದಂತೆ ಸಾರ್ವಜನಿಕರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.

    ‘ನಾನು ಏನು ಮಾಡಲಾಗುವುದಿಲ್ಲ .ನೀವು ಬೇಕಾದರೆ ಅವರ ಮನೆಮುಂದೆ ಮನೆಯನ್ನು ಕಟ್ಟಿರಿ ಎಂದು ಆಗ ಅಭಿವೃದ್ಧಿ ಅಧಿಕಾರಿ ಬಸವಲಿಂಗಪ್ಪ ಪ್ರತಿಕ್ರಯಿಸಿದ್ದು, ಇದರಿಂದ ಗ್ರಾಮಸ್ಥರು ಬಾವಿಗೆ ಹೋಗುವ ದಾರಿ ಮತ್ತು ತಿಮ್ಮಣ್ಣನ ಮನೆಯ ಮುಂದಿನ ದಾರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿದರು. ಇದು ಗ್ರಾಮದಲ್ಲಿ ವೈಷಮ್ಯಕ್ಕೆ ಕಾರಣವಾಯಿತು. ಗ್ರಾಮಸ್ಥರಿಂದ ತನಗೆ ಜೀವಭಯವಿದೆ ಎಂದು ತಿಮ್ಮಣ್ಣ ಪೊಲೀಸ್‌ರ ರಕ್ಷಣೆ ಕೋರಿದ್ದು, ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಗ್ರಾಮದಲ್ಲಿ ಸಿಪಿಐ ಶಂಶಿಕಾಂತ, ಪಿಎಸ್‌ಐ ಸದಾಂ ಹುಸೇನ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

    ನಾನು ನಲ್ವತ್ತು ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸವಾಗಿದ್ದೇನೆ. ನನಗೆ ಜನತಾ ಮನೆ ಮಂಜೂರು ಮಾಡಿದ್ದು, ಮನೆಯ ಅಡಿಪಾಯ ಹಾಕುವಾಗ ಗ್ರಾಮಸ್ಥರು ದಾರಿಬಿಡದಂತೆ ಶೆಡ್ ನಿರ್ಮಿಸಿದರು. ಜೀವಭಯದಿಂದ ನಾನು ಪೊಲೀಸ್‌ರ ರಕ್ಷಣೆಯನ್ನು ಬೇಡಿದ್ದೇನೆ.
    | ತಿಮ್ಮಣ್ಣ ಮಡಿವಾಳ

    ತಿಮ್ಮಣ್ಣ ವಾಸ ಮಾಡುತ್ತಿರುವುದು ಗೈರಾಣಿ ಸ್ಥಳವಾಗಿದೆ. ಗ್ರಾಮದ ದೈವದವರ ನಿರಾಕರಣೆ ಮಧ್ಯೆಯೂ ಮನೆಯನ್ನು ಕಟ್ಟುತ್ತಿದ್ದು, ಪಕ್ಕದಲ್ಲಿರುವ ಪುರಾತನ ಬಾವಿಗೆ ದಕ್ಕೆಯಾಗುತ್ತದೆ. ಹೀಗಾಗಿ ನಮ್ಮ ವಿರೋಧವಿದೆ.
    | ಬಸಪ್ಪ ನಾಯಕ, ಹಿರೇ ಚಿಕ್ಕದಿನ್ನಿ ಗ್ರಾಮಸ್ಥ

    ತಿಮ್ಮಣ್ಣಗೆ ಮನೆ ಕಟ್ಟಿಕೊಟ್ಟಲು ಪಂಚಾಯಿತಿ ಅವಕಾಶ ನೀಡಿಲ್ಲ. ಅವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಗ್ರಾಮಸ್ಥರು ನಿರ್ಮಿಸಿದ್ದ ತಾತ್ಕಾಲಿಕ ಶೆಡ್ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಮಾಡಲಾಗಿದೆ. ತಕರಾರು ಇರುವ ಕಾರಣ ಜನತಾ ಮನೆ ನಿರ್ಮಾಣ ಕೂಡ ಸ್ಥಗಿತಗೊಳಿಸಲು ಸೂಚಿಸಲಾಗಿದೆ.
    | ಬಸವಲಿಂಗಪ್ಪ, ಪಿಡಿಒ, ಹಿರೇದಿನ್ನಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts