ಭಾಷಾವಾರು ಪ್ರಾಂತ್ಯದ ಬೇಡಿಕೆಗೆ ಪರಿಷತ್ ಹೋರಾಟ

1 Min Read
ಭಾಷಾವಾರು ಪ್ರಾಂತ್ಯದ ಬೇಡಿಕೆಗೆ ಪರಿಷತ್ ಹೋರಾಟ
ಎಚ್.ಡಿ.ಕೋಟೆ ಪಟ್ಟಣದ ವಿಶ್ವಭಾರತಿ ಎಜುಕೇಷನ್ ಟ್ರಸ್ಟ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಎಚ್.ಡಿ.ಕೋಟೆ: ಬ್ರಿಟಿಷರ ಆಳ್ವಿಕೆ ವೇಳೆಯಲ್ಲಿ ಕನ್ನಡವು ಪ್ರಾಂತ್ಯಗಳಾಗಿ ಹರಿದು ಹಂಚಿಹೋಗಿತ್ತು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಬೋರಮ್ಮ ಅಂಗಡಿ ತಿಳಿಸಿದರು.

ಪಟ್ಟಣದ ವಿಶ್ವಭಾರತಿ ಎಜುಕೇಷನ್ ಟ್ರಸ್ಟ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಲೇಜಿನ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ರಾಷ್ಟ್ರೀಯ ಚಳವಳಿಯ ಜತೆಗೆ ಕನ್ನಡ ಏಕೀಕರಣದ ಚಳವಳಿಗಳು ನಡೆಯುತ್ತಿದ್ದವು. ಸ್ವಾತಂತ್ರೃ ಬಂದ ಬಳಿಕವೂ ಭಾಷಾವಾರು ಪ್ರಾಂತ್ಯದ ಬೇಡಿಕೆಗೆ ಪರಿಷತ್ತಿನ ವತಿಯಿಂದ ಚಳವಳಿಗಳು ನಡೆದವು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ರಾಜ್ಯದ ಏಳು ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಹೊರಹೊಮ್ಮಿದೆ. ಏಕರೂಪವಾದ ಕನ್ನಡ ಶಿಕ್ಷಣವನ್ನು ಜಾರಿಗೆ ತರಲು ಪರಿಷತ್ತು ಶ್ರಮಿಸಿತ್ತು. ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಎಚ್.ಡಿ. ಕೋಟೆ ತಾಲೂಕಿನಲ್ಲಿ ಉತ್ತಮ ಕನ್ನಡದ ಕಾರ್ಯಗಳು ಪರಿಷತ್ತಿನ ವತಿಯಿಂದ ನಡೆಯುತ್ತಿದೆ. ಕನ್ನಡ ಕಟ್ಟುವ ಕೆಲಸ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.

ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ, ಕನ್ನಡಕ್ಕೆ ಕುತ್ತು ಬಂದಾಗ, ಗಡಿನಾಡಿನ ತಂಟೆಗಳು ಹೆಚ್ಚಾದಾಗ ಸರ್ಕಾರವನ್ನು ನಮ್ಮ ಸಾಹಿತ್ಯ ಪರಿಷತ್ತು ಎಚ್ಚರಿಸುವ ಕೆಲಸ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಸುಮಾರು 4 ಲಕ್ಷ ಸದಸ್ಯರನ್ನು ಹೊಂದಿದ್ದು, ರಾಜ್ಯವಲ್ಲದೆ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದಸ್ಯರನ್ನು ಹೊಂದಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಜಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಂದಸ್ವಾಮಿ, ಶಿವರಾಜು, ಎಸ್.ವಿ.ವಾಸು, ಮಹಾದೇವಿ, ಗಿರೀಶ್ ಮೂರ್ತಿ, ಡೇರಿ ಶ್ರೀಕಾಂತ್ ಇದ್ದರು.

See also  ತಂಬಾಕಿನಿಂದ ಬದುಕು ಕಟ್ಟಿಕೊಂಡ ರೈತ
Share This Article