More

    ಕರೊನಾ ಗೆದ್ದ ಕ್ರಿಕೆಟಿಗ ಕರುಣ್ ನಾಯರ್

    ಬೆಂಗಳೂರು: ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವರು ಕರೊನಾ ಸೋಂಕಿತರಾದ ಮೊದಲ ಐಪಿಎಲ್ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾದ ಮೊದಲ ಆಟಗಾರ ಎನಿಸಿದ್ದಾರೆ.

    ಕಳೆದ ತಿಂಗಳು ನಡೆದ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದನ್ನು 28 ವರ್ಷದ ಕರುಣ್ ನಾಯರ್ ಬಹಿರಂಗಪಡಿಸಿದ್ದು, ಆಗಸ್ಟ್ 8ರಂದು ನಡೆದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುವುದಾಗಿಯೂ ತಿಳಿಸಿದ್ದಾರೆ. ಮುಂದಿನ ವಾರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜತೆಗೆ ಅವರು ಯುಎಇಗೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದು, ಅದಕ್ಕೆ ಮುನ್ನ ತಂಡದ ಇತರರಂತೆ 3 ನೆಗೆಟಿವ್ ವರದಿಗಳನ್ನು ಪಡೆದುಕೊಳ್ಳಬೇಕಾಗಿದೆ. ಆ. 20ರಂದು ಬೆಂಗಳೂರಿನಲ್ಲಿ ಅವರು ತಂಡದ ಇತರ ಸದಸ್ಯರ ಜತೆಗೆ ಯುಎಇ ವಿಮಾನ ಏರುವ ನಿರೀಕ್ಷೆ ಇದೆ.

    ಪಾಸಿಟಿವ್ ವರದಿ ಬಂದ ಬಳಿಕ ಕರುಣ್ ನಾಯರ್ 2 ವಾರಗಳ ಕಾಲ ಸ್ವಯಂ-ಐಸೋಲೇಷನ್‌ನಲ್ಲಿದ್ದರು. ಸೋಂಕಿನ ಲಕ್ಷಣರಹಿತರಾಗಿಯೇ ಇದ್ದ ಕರುಣ್ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಈಗ ವೈಯಕ್ತಿಕ ತರಬೇತಿಯನ್ನೂ ಆರಂಭಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಕೊಹ್ಲಿಯನ್ನು ಸಿಂಹಕ್ಕೆ ಹೋಲಿಸಿದಕ್ಕೆ ಆರ್​ಸಿಬಿ ಕಾಲೆಳೆದ ಸಿಎಸ್​ಕೆ…!

    ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ 2ನೇ ಭಾರತೀಯರೆನಿಸಿರುವ ಕರುಣ್ ನಾಯರ್ ಭಾರತ ಪರ 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಅವರು 2018 ಮತ್ತು 2019ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಒಟ್ಟು 14 ಪಂದ್ಯಗಳನ್ನು ಆಡಿ 306 ರನ್ ಬಾರಿಸಿದ್ದರು.
    ಕರುಣ್ ನಾಯರ್ ಕಿಂಗ್ಸ್ ಇಲೆವೆನ್ ಪರ ಕಣಕ್ಕಿಳಿಯಲಿರುವ ಐವರು ಕನ್ನಡಿಗರಲ್ಲಿ ಒಬ್ಬರೆನಿಸಿದ್ದಾರೆ. ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕೆ. ಗೌತಮ್ ಮತ್ತು ಜೆ. ಸುಚಿತ್ ತಂಡದಲ್ಲಿರುವ ಇತರ ಕನ್ನಡಿಗರು. ರಾಜ್ಯದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ತಂಡಕ್ಕೆ ಕೋಚ್ ಆಗಿದ್ದಾರೆ.

    ಇದಕ್ಕೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ವರದಿ ಪಾಸಿಟಿವ್ ಬಂದಿತ್ತು. ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯ ದುಬೈ, ಶಾರ್ಜಾ ಮತ್ತು ಅಬುಧಾಬಿ ಮೈದಾನಗಳ ಜೈವಿಕ-ಸುರಕ್ಷಾ ವಾತಾವರಣದಲ್ಲಿ ನಡೆಯಲಿದೆ.

    ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಲೌರಾ ಮಾರ್ಷ್ ವಿದಾಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts