More

    51 ವರ್ಷದ ಬಳಿಕ ರಾಜ್ಯದಲ್ಲಿ ದಾಖಲೆ ಮಳೆ..!

    ಬೆಂಗಳೂರು: ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ರಾಜ್ಯಕ್ಕೆ ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. 51 ವರ್ಷ ಬಳಿಕ ರಾಜ್ಯಾದ್ಯಂತ ಜುಲೈ ಅವಧಿಯಲ್ಲಿ ದಾಖಲೆ ಮಳೆಯಾಗಿದೆ.

    1971ರಿಂದ 2021ರ ಜುಲೈನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿದಿಲ್ಲ. 1994ರಲ್ಲಿ ಶೇ.31, 2005ರಲ್ಲಿ ಶೇ.32, 2009ರಲ್ಲಿ ಶೇ.28 ಮತ್ತು 2013ರಲ್ಲಿ ಶೇ.29 ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿತ್ತು. ಆದರೆ, ನಾಲ್ಕು ವರ್ಷಗಳಿಂದ ಜೂನ್ ಅವಧಿಯಲ್ಲಿ ಮಳೆ ಕೊರತೆ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಯಂತೆ 199 ಮಿಮೀ ಮಳೆಯಾಗಬೇಕಿತ್ತು. ಆದರೆ, 156 ಮಿಮೀ ಬಿದ್ದಿದೆ. ಶೇ. 22 ಮಳೆ ಕೊರತೆ ಉಂಟಾಗಿದೆ. ಈ ವೇಳೆ 90 ತಾಲೂಕುಗಳಿಗೆ ಮಳೆ ಆಭಾವ ಕಾಡಿದೆ. 80 ಲಕ್ಷ ಹೆಕ್ಟೇರ್ ಪ್ರದೇಶಗಳ ಪೈಕಿ ಕೇವಲ 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಜುಲೈನಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ 271 ಮಿಮೀ ಮಳೆಯಾಗುವ ಬದಲಾಗಿ 383 ಮಿಮೀ ಮಳೆಯಾಗಿತ್ತು. ಶೇ.41 ಅಧಿಕ ಮಳೆ ಸುರಿದಿದೆ.

    ಈ ಸಂದರ್ಭದಲ್ಲಿ 134 ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿತ್ತು. 82 ಲಕ್ಷ ಹೆಕ್ಟರ್ ಪ್ರದೇಶಗಳ ಬಿತ್ತನೆ ಗುರಿ ಪೈಕಿ 60 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಆಗಸ್ಟ್‌ನಲ್ಲಿ ರಾಜ್ಯದಲ್ಲಿ 220 ಮಿಮೀ ಬದಲಾಗಿ 305 ಮಿಮೀ ಬಿದ್ದಿದ್ದು, ಶೇ.38 ವಾಡಿಕೆಗಿಂತ ಹೆಚ್ಚು ಸುರಿದಿದ್ದು, 124 ತಾಲೂಕುಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಬಿದ್ದಿದೆ. ಒಟ್ಟಿನಲ್ಲಿ ಎರಡು ತಿಂಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿರುವುದು ಅಂಕಿಅಂಶಗಳಿಂದ ದೃಢಪಟ್ಟಿದೆ.

    ಈ ಬಾರಿ ನೈಋತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ವಾಡಿಕೆಗಿಂತ ಮುನ್ನವೇ ಆಗಮಿಸಿತ್ತು. ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಜುಲೈ ಮತ್ತು ಆಗಸ್ಟ್‌ನಲ್ಲಿ ಚುರುಕುಗೊಂಡಿತು. ದಕ್ಷಿಣ ಒಳನಾಡಿನಲ್ಲಿ ಜೂನ್‌ನಲ್ಲಿ ಶೇ.83, ಜುಲೈನಲ್ಲಿ ಶೇ.87 ಮತ್ತು ಆಗಸ್ಟ್‌ನಲ್ಲಿ ಶೇ.208 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ಕರಾವಳಿಯಲ್ಲಿ ಜುಲೈನಲ್ಲಿ ವಾಡಿಕೆಯಷ್ಟೇ ಮತ್ತು ಆಗಸ್ಟ್‌ನಲ್ಲಿ ಶೇ.8 ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಅದೇರೀತಿ, ಜೂನ್‌ನಲ್ಲಿ ಮಳೆ ಕೊರತೆ ಕಾಡಿದ್ದ ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಸುರಿದಿರುವುದು ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

    ಮಳೆ ಅವಧಿ ಬದಲಾವಣೆ:

    ಹವಾಮಾನ ವೈಪರಿತ್ಯಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೂನ್‌ನಲ್ಲಿ ಮುಂಗಾರು ಮಳೆ ಕ್ಷೀಣಿಸಿದರೆ ಜುಲೈ ತಿಂಗಳಾದ್ಯಂತ ಸುರಿಯಬೇಕಿದ್ದ ಮಳೆ ಪ್ರಮಾಣ ವಾರದಲ್ಲೇ ವಾಡಿಕೆಗಿಂತ ಅಧಿಕವಾಗಿ ಸುರಿದಿದೆ. ಈ ಕ್ರಮದಿಂದ ನಾಲ್ಕು ವರ್ಷಗಳಿಂದ ಮಳೆ ಬೀಳುವ ಅವಧಿಯಲ್ಲಿ ಗಣನೀಯವಾಗಿ ವ್ಯತ್ಯಾಸವಾಗಿದೆ. ಅಲ್ಲದೆ, ಕೃಷಿ ಚಟುವಟಿಕೆಗಳ ಮೇಲೂ ಇದರಿಂದ ಪರಿಣಾಮ ಬೀರಿದೆ. ಮಲೆನಾಡು ಜಿಲ್ಲೆಗಳಲ್ಲಿ 2018ರ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೆ, 2019ರಿಂದ 2022ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರಾವಳಿಯಲ್ಲಿ ಕಳೆದ 4 ವರ್ಷಗಳಿಂದ ಜೂನ್‌ನಲ್ಲಿ ಮಳೆ ಕುಂಠಿತವಾಗುತ್ತಿದೆ.

    ಅದೇರೀತಿ, ದಕ್ಷಿಣ ಒಳನಾಡಿನಲ್ಲಿ 2017ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದರೆ, 2018ರಿಂದ 2022ರ ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ 2017, 2019, 2020 ಮತ್ತು 2021ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೆ 2018 ಮತ್ತು 2022ರ ಜೂನ್‌ನಲ್ಲಿ ವಾಡಿಕೆಯಷ್ಟೇ ಮಳೆ ಬಿದ್ದಿದೆ. ಐದು ವರ್ಷಗಳಿಂದ ಜೂನ್ ಅವಧಿಯಲ್ಲೇ ರಾಜ್ಯಾದ್ಯಂತ ಮಳೆ ಕುಂಠಿತಗೊಂಡಿದೆ. ಹಾಗಾಗಿ, ಎಲ್ಲ ಅಂಕಿಅಂಶಗಳನ್ನು ಗಮನಿಸಿದರೆ ಮಳೆಗಾಲ ಅವಧಿ ಜೂನ್‌ನಿಂದ ಜುಲೈಗೆ ಬದಲಾಗಿದೆ.

    ಗಂಟೆಯಲ್ಲೇ 100 ಮಿಮೀ ಮಳೆ:

    ತಿಂಗಳಲ್ಲಿ ಬೀಳಬೇಕಿದ್ದ ಮಳೆ ಪ್ರಮಾಣ ವಾರದಲ್ಲೇ, ವಾರದಲ್ಲೇ ಬೀಳಬೇಕಿದ್ದ ಮಳೆ ಪ್ರಮಾಣ ಒಂದು ದಿನದಲ್ಲೇ ಹಾಗೂ ದಿನದಲ್ಲಿ ಬೀಳುವ ಮಳೆ ಪ್ರಮಾಣ ಒಂದು ಗಂಟೆಯಲ್ಲಿ ಸುರಿಯುತ್ತಿದೆ. ಹಿಂದಿನ ಅಂಕಿ ಅಂಶ ಗಮನಿಸಿದರೆ ಒಂದು ಗಂಟೆ ಅವಧಿಯಲ್ಲಿ ಅಂದಾಜು 100 ಮಿಮೀವರೆಗೆ ಮಳೆಯಾಗುತ್ತಿದೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿದೆ.

    4 ದಿನ ಸಾಧಾರಣ ಮಳೆ:

    ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ತುಸು ತಗ್ಗಿದೆ. ಕರಾವಳಿ ಹೊರತುಪಡಿಸಿ ಮಲೆನಾಡು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 4 ದಿನ ಚದುರಿದಂತೆ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಶುಕ್ರವಾರ ವಿಜಯಪುರದ ನಲ್ವಾತ್‌ವಾಡ್, ಕಲಬುರಗಿಯ ಕಮಲಾಪುರ ಮತ್ತು ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ ಸೆಂಮೀ ಮಳೆ ಸುರಿದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆ.10ರಿಂದ ಸೆ.13ರವರೆಗೆ, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ ಮತ್ತು ಧಾರವಾಡದಲ್ಲಿ ಸೆ.11ರಂದು ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.

    ಮೆಗಾ ಬ್ಲಾಕ್‌ಬಸ್ಟರ್ ಸೇಲ್ ಘೋಷಿಸಿದ ಮೀಶೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts