More

    ಸಚಿವ ಸಂಪುಟದ ಭವಿಷ್ಯ ಇಂದು ನಿರ್ಧಾರ – ಷಾ, ನಡ್ಡಾ ಭೇಟಿಗೆ ಬಿಎಸ್​ವೈ ದೆಹಲಿ ಪ್ರವಾಸ ನಿಗದಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ‘ಗಜಗರ್ಭ ಪ್ರಸವ’ದಂತಾಗಿರುವ ಸಚಿವ ಸಂಪುಟ ವಿಸ್ತರಣೆಯೋ? ಅಥವಾ ಪುನಾರಚನೆಯೋ ಎನ್ನುವುದು ಇತ್ಯರ್ಥವಾಗುವ ಸಾಧ್ಯತೆಗಳಿವೆ.

    ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸುವ ಬಿಎಸ್​ವೈ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರದ ಕೆಲವು ಸಚಿವರೊಂದಿಗೆ ರ್ಚಚಿಸಿ, ರಾತ್ರಿಯೇ ಬೆಂಗಳೂರಿಗೆ ಮರಳಲಿದ್ದಾರೆ. ಈ ಮಧ್ಯೆ ಪೂರ್ವ ನಿಗದಿತ ಸಚಿವ ಸಂಪುಟ ಸಭೆ ಬುಧವಾರ ಮಧ್ಯಾಹ್ನ 11.30ರ ಬದಲಿಗೆ 10.30ಕ್ಕೆ ನಡೆಯಲಿದೆ. ಅಲ್ಲದೆ, ಎಲ್ಲ ಸಚಿವರಿಗೂ ಕಡ್ಡಾಯವಾಗಿ ಹಾಜರಾಗಬೇಕೆಂಬ ಸೂಚನೆ ನೀಡಿರುವುದು ಕುತೂಹಲ ಕೆರಳಿಸಿದೆ. ಪಕ್ಷದ ಕೇಂದ್ರೀಯ ನಾಯಕರೊಂದಿಗೆ ದೆಹಲಿಗೆ ತೆರಳುವ ವಿಷಯವನ್ನು ಯಡಿಯೂರಪ್ಪ ಈ ಸಭೆಯಲ್ಲಿ ಪ್ರಸ್ತಾಪಿಸಿ, ಮಹತ್ವದ ಸುಳಿವು ನೀಡಲಿದ್ದಾರೆ. ಆ ಮೂಲಕ ಸಂಪುಟ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾನಸಿಕವಾಗಿ ಅಣಿಗೊಳಿಸುವ ಚಿಂತನೆ ನಡೆಸಿದ್ದಾರೆ.

    ವರಿಷ್ಠರ ಚಿತ್ತ: ಉಪಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ದೆಹಲಿ ನಾಯಕರ ಭೇಟಿಗೆ ಬಿಎಸ್​ವೈ ತುದಿಗಾಲಲ್ಲಿ ನಿಂತಿದ್ದರು. ಬಿಹಾರದಲ್ಲಿ ಎನ್​ಡಿಎ ಸರ್ಕಾರ ರಚನೆಯಾದ ಬಳಿಕ ವರಿಷ್ಠರು ರಾಜ್ಯದತ್ತ ಕೊನೆಗೂ ಗಮನಹರಿಸಿದ್ದಾರೆ. ವರಿಷ್ಠರೊಂದಿಗೆ ಮೊಬೈಲ್​ನಲ್ಲಿ ಬಿಎಸ್​ವೈ ಮತ್ತೊಮ್ಮೆ ಸಂರ್ಪಸಿ ಮಾತನಾಡುವ ಮೂಲಕ ಭೇಟಿಗೆ ಕಾಲಾವಕಾಶ ಪಡೆದುಕೊಂಡಿದ್ದು, ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ:  ದೇವರಿಗೊಂದು ಪತ್ರ: ಹಗಲಲ್ಲಿ ‘ಎಣ್ಣೆ’ ಕುಡಿಯಲ್ಲ… ನನಗೆ ಹೆಂಡ್ತಿ-ಮಕ್ಕಳು ಬೇಕು!

    ಬಿಎಸ್​ವೈ ಅಲ್ಪಾವಧಿಯ ದೆಹಲಿ ಪ್ರವಾಸ ಅನೇಕ ಸಚಿವರು ಹಾಗೂ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಚಡಪಡಿಕೆ ಹೆಚ್ಚಿಸಿದ್ದು, ಹಲವಾರು ತಿಂಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದವರಲ್ಲಿ ಆಶಾಭಾವ ಗರಿಗೆದರಿದೆ. ಸಂಪುಟ ವಿಸ್ತರಿಸಿ ಕೆಲವರಿಗೆ ನೀಡಿದ ಭರವಸೆ ಈಡೇರಿಸಬೇಕು ಎನ್ನುವುದು ದೆಹಲಿ ನಾಯಕರ ಅಪೇಕ್ಷೆಯಾಗಿದ್ದು, ಖಾಲಿಯಿರುವ 7 ಸ್ಥಾನಗಳ ಪೈಕಿ 6 ಭರ್ತಿ ಮಾಡಿ, 1 ಖಾಲಿ ಉಳಿಸುವುದಕ್ಕೆ ಸೂಚನೆ ನೀಡಲಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿರುವ ಕಾರಣ ವಿಸ್ತರಣೆಯಿಂದ ಸಮಸ್ಯೆ ಬಗೆಹರಿಯದು. ಪುನಾರಚನೆ ಸೂಕ್ತವೆಂಬ ಒಲವು ಸಿಎಂ ಅವರದ್ದಾಗಿದ್ದು, ಭೇಟಿ ಕಾಲಕ್ಕೆ ಇದನ್ನೇ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಅನೇಕ ಕಾರಣಗಳಿಗಾಗಿ ಸಾಕಷ್ಟು ವಿಳಂಬವಾಗಿದ್ದು, ಪಕ್ಷ ಅಧಿಕಾರಕ್ಕೆ ತಂದವರು ಹಾಗೂ ಕಟ್ಟಿ ಬೆಳೆಸಿದವರಿಗೆ ಸಮಾನ ಆದ್ಯತೆ ನೀಡುವುದು ಸೂಕ್ತ. ಹೀಗಾಗಿ 3-4 ಜನರನ್ನು ಕೈಬಿಟ್ಟು, ಕನಿಷ್ಟ 10 ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂಬುದು ಬಿಎಸ್​ವೈ ಚಿಂತನೆಯಾಗಿದೆ. ವರಿಷ್ಠರು ಹಾಗೂ ಬಿಎಸ್​ವೈ ಒಲವು-ನಿಲುವು ವಿಭಿನ್ನವಾಗಿದೆ. ಹೀಗಾಗಿ ಹಾಲಿ-ಭಾವಿ ಸಚಿವರಲ್ಲಿ ಆತಂಕ, ಕಾತರ ಹೆಚ್ಚಿಸಿದೆ. ಹಾಗೆಯೇ ಈ ಬಾರಿ ವಿಸ್ತರಣೆ ಇಲ್ಲವೇ ಪುನಾರಚನೆ ಇವೆರಡರಲ್ಲಿ ಒಂದಾಗುವುದು ಖಚಿತ ಎಂದು ಮೂಲಗಳು ಹೇಳಿವೆ.

    ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆಯೇ ಈ ಸಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts