More

    192ಎ ರದ್ದು; ಅನುಷ್ಠಾನಕ್ಕೆ ಬಾರದಿದ್ದರೆ ಆಗುತ್ತೆ ಚುನಾವಣಾ ಗಿಮಿಕ್: ತೀ.ನ.ಶ್ರೀನಿವಾಸ್

    ಸಾಗರ: ರಾಜ್ಯ ಸರ್ಕಾರ ಭೂಮಿ ಕುರಿತ 192ಎ ರದ್ದುಪಡಿಸುವುದಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನು ಭೂಕಬಳಿಕೆ ನ್ಯಾಯಾಲಯದ ನ್ಯಾಯಾಧೀಶರಿಗೆ ಸರ್ಕಾರ ಕಳಿಸಿ ಅದನ್ನು ತಕ್ಷಣದಿಂದಲೇ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಮೊದಲು ಗಮನ ಹರಿಸಬೇಕು ಎಂದು ಮಲೆನಾಡು ಭೂಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು.
    ಸಚಿವ ಸಂಪುಟದ ಈ ನಿರ್ಧಾರ ತಕ್ಷಣ ಅನುಷ್ಠಾನಕ್ಕೆ ಬಾರದೆ ಹೋದಲ್ಲಿ ಇದೊಂದು ಚುನಾವಣೆ ಗಿಮಿಕ್ ಎಂದು ವೇದಿಕೆ ಭಾವಿಸಬೇಕಾಗುತ್ತದೆ. ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡ ನಿರ್ಣಯ ಸದನದಲ್ಲಿ ಚರ್ಚೆ ನಡೆಸಿ ಅಲ್ಲಿ ತೀರ್ಮಾನ ತೆಗೆದುಕೊಂಡು ರಾಜ್ಯಪಾಲರಿಗೆ ಕಳಿಸಿ ಅಂಕಿತ ಪಡೆಯಬೇಕಾಗುತ್ತದೆ. ಇದು ತೀರ ವಿಳಂಬವಾಗುವುದರಿಂದ ಮತ್ತಷ್ಟು ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿ ಬೆಂಗಳೂರಿನ ಭೂಕಬಳಿಕೆ ನ್ಯಾಯಾಲಯಕ್ಕೆ ಅಲೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ನಿಜವಾಗಿಯೂ ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ ನ್ಯಾಯಾಧೀಶರಿಗೆ ಪತ್ರ ಬರೆದು ಪ್ರಕರಣದ ವಿಚಾರಣೆ ಕೈಬಿಡುವಂತೆ ಮನವಿ ಮಾಡಿಕೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    2020ರಲ್ಲಿಯೆ ಭೂಕಬಳಿಕೆಗೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾನು, ಅರಣ್ಯ, ಬಗರ್‌ಕುಂ, 94ಸಿ ಅಡಿ ಸ್ವಾಧೀನ ಹೊಂದಿರುವವರ ಮೇಲೆ ಪ್ರಕರಣ ದಾಖಲು ಮಾಡಬಾರದು ಎಂದಿದ್ದರೂ ಸರ್ಕಾರ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಒಂದು ಬಾರಿ ನೋಟಿಸ್ ಕೊಟ್ಟವರಿಗೆ ಮತ್ತೊಂದು ಬಾರಿ ನೋಟಿಸ್ ನೀಡಿ ಅವರನ್ನು ಬೆಂಗಳೂರಿಗೆ ಅಲೆಯುವಂತೆ ಮಾಡಲಾಗುತ್ತಿದೆ. ಶಾಸಕ ಹರತಾಳು ಹಾಲಪ್ಪ 192ಎ ರದ್ದುಪಡಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಅಂತಿಮವಲ್ಲ. ಶಾಸಕರು ಮುಂದಿನ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ರೈತರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಬೇಕು ಎಂದರು.
    ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಕರಣ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಜನರಿಗೆ ನೋಟಿಸ್ ನೀಡಲಾಗಿದೆ. ಜಿಲ್ಲೆಯ ಸಂಸದರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಎಲ್ಲರೂ ರೈತರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೆ ಭೂಕಬಳಿಕೆ ಮಾಡಿದವರ ಮೇಲೆ ಕೇಸ್ ಹಾಕುವ ಕಾಯ್ದೆ ಜಾರಿಗೆ ಬಂದಿದ್ದು. ಶಾಸಕರ ಪ್ರಯತ್ನಗಳು ಪ್ರಾಮಾಣಿಕವಾಗಿ ಫಲವಂತಿಕೆಯನ್ನು ಕಾಣಬೇಕು. ಅದು ಕೇವಲ ಮನವಿ ಕೊಡುವುದಕ್ಕೆ ಸಿಮಿತವಾಗಿ ಬಿಡಬಾರದು ಎಂದು ಹೇಳಿದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts