More

    ಸ್ಕಾಟ್ಲೆಂಡ್ ಕಿರಿಯರ ಕ್ರಿಕೆಟ್ ತಂಡದಲ್ಲಿ ಕನ್ನಡಿಗ: ಬೆಂಗಳೂರಿನಲ್ಲಿ ತರಬೇತಿ, ವಿಶ್ವಕಪ್‌ಗೂ ಆಯ್ಕೆ

    ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಪರ ಬೆಂಗಳೂರು ಮೂಲದ ರಚಿನ್ ರವೀಂದ್ರ ಮಿಂಚಿದರು. ಅದೇ ರೀತಿ ಮತ್ತೋರ್ವ ಕರ್ನಾಟಕದ ಹುಡುಗ ಆದಿ ಹೆಗಡೆ ಈಗ ಸ್ಕಾಟ್ಲೆಂಡ್ ಪರ ಗಮನಸೆಳೆಯಲು ಸಜ್ಜಾಗಿದ್ದಾರೆ. ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವಯೋಮಿತಿಯ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ 18 ವರ್ಷದ ಆದಿ ಹೆಗಡೆ ಸ್ಕಾಟ್ಲೆಂಡ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

    ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಸೊರಬ ತಾಲೂಕಿನ ಹರೀಶಿ ಗ್ರಾಮದ ಡಾ. ವಿಜಯ ಹೆಗಡೆ- ಶುಭಾ ದಂಪತಿಯ ಪುತ್ರ ಆದಿ ಹೆಗಡೆ ಎಡಗೈ ಆಲ್ರೌಂಡರ್ ಆಗಿದ್ದು, ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ 3 ತಿಂಗಳು ತರಬೇತಿ ಸಹ ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ವಿಜಯ ಹೆಗಡೆ ಸ್ಕಾಟ್ಲೆಂಡ್‌ನ ಅಬರ್ಡೀನ್ ಎಂಬಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಗನ ಕ್ರಿಕೆಟ್ ಆಸಕ್ತಿ ಗಮನಿಸಿ ರಣಜಿ ಆಟಗಾರರಾದ ಅಂಜು ಮದಕವಿ, ಸಂಜು ಮದಕವಿ ಬಳಿ ತರಬೇತಿ ಕೊಡಿಸಲು ನಿರ್ಧರಿಸಿದರು.

    ಆದಿ ಪ್ರಸ್ತುತ ಕ್ರಿಕೆಟ್‌ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿ ಶಿಕ್ಷಣದಿಂದ ಒಂದು ವರ್ಷದ ಬ್ರೇಕ್ ಪಡೆದುಕೊಂಡಿದ್ದು, ಬಳಿಕ ಲಂಡನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ ವಿಷಯದಲ್ಲಿ ಅಧ್ಯಯನ ನಡೆಸುವ ಯೋಜನೆ ಹೊಂದಿದ್ದಾರೆ. ‘ವರ್ಷಕ್ಕೆ 2-3 ಬಾರಿ ಭಾರತಕ್ಕೆ ಭೇಟಿ ನೀಡುತ್ತೇನೆ. ಅಕಾಡೆಮಿಯಲ್ಲಿ ತರಬೇತಿ ಪಡೆಯುವಾಗ ರಾಜ್ಯದ ಮನೀಷ್ ಪಾಂಡೆ, ಕರುಣ್ ನಾಯರ್ ಕೆಲ ಸಲಹೆಗಳನ್ನು ನೀಡಿದ್ದಾರೆ’ ಎಂದು ಆದಿ ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ವೆಬ್‌ಸೈಟ್‌ನಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಬರ್ಡೀನ್ ಕಿರಿಯರ ತಂಡ ಆದಿ ಹೆಗಡೆ ನಾಯಕತ್ವದಲ್ಲಿ ದೇಶೀಯ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದೆ. ಪ್ರಸ್ತುತ 25 ಪಂದ್ಯಗಳನ್ನಾಡಿರುವ ಆದಿ, 234 ರನ್ ಕಲೆಹಾಕಿ, 31 ವಿಕೆಟ್ ಕಬಳಿಸಿದ್ದಾರೆ. 19 ರನ್‌ಗಳಿಗೆ 5 ವಿಕೆಟ್ ಪಡೆದಿರುವುದು ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts