More

    ಭಾಷೆಯ ಪಂಚಾಂಗದಿಂದ ಸಂಸ್ಕೃತಿ ರೂಪು: ಕಾರ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮನೋಹರ ಪ್ರಸಾದ್ ಅಭಿಮತ

    ಕಾರ್ಕಳ: ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿವೆ. ಸಂಸ್ಕೃತಿ ರೂಪುಗೊಳ್ಳಲು ಭಾಷೆಯ ಪಂಚಾಂಗ ಬೇಕು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನೂರಾರು ಭಾಷೆಗಳು ನಾಶವಾಗಿವೆ. ಹಲವು ಆಂಗ್ಲಭಾಷಾ ಶಿಕ್ಷಕರ ನಗರೀಕರಣ ಮತ್ತು ಒಣ ಪ್ರತಿಷ್ಠೆಗಳಿಂದ ಮಣ್ಣಿನ ಮೂಲಭಾಷೆಗಳು ನಶಿಸಿ ಹೋಗಿವೆ ಎಂದು ಬರಹಗಾರ, ಸಾಹಿತಿ ಮನೋಹರ ಪ್ರಸಾದ್ ಹೇಳಿದರು.

    ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮುದ್ದಣ ವೇದಿಕೆ ಹಾಲ್ಡಿನ್ ಗ್ಲಾಸ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ 17ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
    ನಗರವಾಸಿ ಪಾಲಕರು ಕೂಡ ಕನ್ನಡ ಕಲಿಕೆ ಅಪಮಾನ ಎಂದು ಭಾವಿಸಿದ್ದಾರೆ. ಅದನ್ನು ಬಿಡಬೇಕು. ಕನ್ನಡವು ಅಷ್ಟೇ ಶಕ್ತಿಶಾಲಿಯಾಗಿದೆ . ಭಾಷೆಯ ಕಲಿಕೆ, ಸಾಹಿತ್ಯದ ಓದು ಕನ್ನಡದ ಪತ್ರಿಕೆಗಳನ್ನು ಓದುವ ಮೂಲಕ ಆರಂಭವಾಗುತ್ತದೆ. ಬಾಲ್ಯದಲ್ಲಿ ಅಸೆಂಬ್ಲಿಯಲ್ಲಿ ಪತ್ರಿಕೆಯ ಓದು ನಮಗೆ ಇಡೀ ಜಗತ್ತನ್ನು ಕಣ್ಣ ಮುಂದೆ ತರುತ್ತಿತ್ತು. ಅದು ಮುಂದುವರಿಯಬೇಕು ಎಂದರು.

    ಮಾತೃಭಾಷೆ ಕಡೆಗಣನೆ ಸಲ್ಲ
    ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವುದು ಬೇರೆ, ಮಾಧ್ಯಮವಾಗಿ ಓದುವುದು ಬೇರೆ. ಮಾತೃಭಾಷೆ ಕಡೆಗಣಿಸಿದರೆ ನಮ್ಮ ಬದುಕಿನ ಮೂಲದ್ರವ್ಯವನ್ನು ನಾಶ ಮಾಡಿದಂತೆ. ಮಾತೃಭಾಷೆ, ರಾಜ್ಯ ಭಾಷೆ ಈ ಬಗ್ಗೆ ನಮಗೆ ಗೊಂದಲ ಬೇಡ. ಕರ್ನಾಟಕದಲ್ಲಿ ಎರಡೂ ಭಾಷೆಗಳು ಕೂಡ ಕನ್ನಡವೇ ಆಗಿವೆ, ಆಗಬೇಕು. ರಾಜ್ಯದಲ್ಲಿ ಶಿಕ್ಷಣ ಮಾಧ್ಯಮ ಕೇವಲ ಕನ್ನಡವೇ ಆಗಬೇಕು. ಎಳೆಯರಿಗೆ ಕನ್ನಡ ಸಾಹಿತ್ಯದ ಪರಿಚಯ ಸಣ್ಣ ತರಗತಿಯಿಂದ ಆದರೆ ಅವರು ಕನ್ನಡದ ಆಸ್ತಿಗಳಾಗಿ ಬೆಳೆಯುತ್ತಾರೆ. ಕನ್ನಡವನ್ನು ವಿದ್ಯಾರ್ಥಿಗಳ ಕಿವಿಗೆ ಮಾತ್ರ ಇಳಿಸದೆ ಹೃದಯಕ್ಕೆ ಇಳಿಸುವ ಶಿಕ್ಷಕರು ಇಂದಿನ ಅಗತ್ಯ. ದೇವಸದೃಶ ಕನ್ನಡ ಶಿಕ್ಷಕರು ನಮಗೆ ಬದುಕುವುದನ್ನು ಕಲಿಸಿದರು. ಕಲ್ಪನೆ, ಮೌಲ್ಯ ಬಿತ್ತಿ ಕನ್ನಡ ಅನ್ನದ ಬಟ್ಟಲು ಆಗುವ ಹಾಗೆ ಮಾಡಿದರು ಎಂದರು ಮನೋಹರ್‌ಪ್ರಸಾದ್.
    ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶಾಸಕ ವಿ.ಸುನೀಲ್ ಕುಮಾರ್, ಸಾಹಿತ್ಯ ಉಳಿದಲ್ಲಿ ಮಾತ್ರ ಮಾನವೀಯತೆ ನೆಲೆಗೊಳ್ಳಲು ಸಾಧ್ಯ. ಸಾಹಿತ್ಯ ಚಟುವಟಿಕೆ ನಿರಂತರವಾಗಿ ನಡೆದಲ್ಲಿ ಯುವ ಪೀಳಿಗೆಯನ್ನು ಓದು-ಬರಹದತ್ತ ಆಕರ್ಷಿಸಲು ಅನುಕೂಲವಾಗಲಿದೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಕನ್ನಡ ಶಾಲಾ ಉಳಿಸುವಲ್ಲಿ ಸರ್ಕಾರ ಎಡವುತ್ತಿದೆ. ಸರ್ಕಾರದ ಧೋರಣೆ ಹಲವು ಕನ್ನಡ ಶಾಲೆಗಳ ಅವನತಿಗೆ ಮುನ್ನುಡಿ ಬರೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
    ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಡಾ.ಜೆ.ದಿನೇಶ್ಚಂದ್ರ ಹೆಗ್ಡೆ, ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಮಾತನಾಡಿದರು.
    ಕೃಷಿ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ರಾಷ್ಟ್ರ ಧ್ವಜಾರೋಹಣಗೈದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪರಿಷತ್ ಧ್ವಜಾರೋಹಣ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಜಿ.ಪಂ ಅಧ್ಯಕ್ಷ ದಿನಕರ ಬಾಬು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಕೆ.ವಿಜಯಕುಮಾರ್ ಅವರನ್ನು ನಿವೃತ್ತ ವೈದ್ಯಾಧಿಕಾರಿ ಡಾ. ಜಿ. ದಿನೇಶ್ಚಂದ್ರ ಹೆಗ್ಡೆ ಸನ್ಮಾನಿಸಿದರು.

    ಸನ್ಮಾನ ಸಾಳ್ವೆಗೆ ಅರ್ಪಣೆ
    ಪಾಕಿಸ್ಥಾನದಿಂದ ಶಿಕ್ಷೆಗೊಳಪಟ್ಟ ಜಾಧವ್ ಅವರ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿ, ಜಾಧವ್ ಅವರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಭಾರತದ ಪ್ರತಿಷ್ಠೆ, ಗೌರವ ಎತ್ತಿ ಹಿಡಿದ ವಕೀಲ ಸಾಳ್ವೆ ಅವರಿಗೆ ನನ್ನ ಸನ್ಮಾನವನ್ನು ಅರ್ಪಿಸುತ್ತೇನೆ ಎಂದು ಎಂ.ಕೆ. ವಿಜಯ ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts