More

    ಭಾರತೀಯ ಕ್ರಿಕೆಟ್ ಚಿತ್ರಣವನ್ನೇ ಬದಲಾಯಿಸಿದ ಕಪಿಲ್ ದೇವ್ ಇನಿಂಗ್ಸ್‌ಗೆ 37 ವರ್ಷ

    ಬೆಂಗಳೂರು: ಕಪಿಲ್ ದೇವ್ ಸಾರಥ್ಯದಲ್ಲಿ ಸಾಧಿಸಿದ 1983ರ ಏಕದಿನ ವಿಶ್ವಕಪ್ ಗೆಲುವು ಭಾರತೀಯ ಕ್ರಿಕೆಟ್‌ನ ಚಿತ್ರಣವನ್ನೇ ಬದಲಾಯಿಸಿತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ವಿಶ್ವಕಪ್ ಟ್ರೋಫಿ ಭಾರತಕ್ಕೆ ಒಲಿಯುವಂತೆ ಮತ್ತು ಟ್ರೋಫಿ ಗೆಲುವಿನ ಆಸೆ ಜೀವಂತ ಉಳಿಯುವಂತೆ ಮಾಡಿದ್ದು ನಾಯಕ ಕಪಿಲ್ ದೇವ್ ಅವರ ಆ ಒಂದು ಇನಿಂಗ್ಸ್. ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿ ಸೋಲಿನ ದವಡೆಯಿಂದ ಗೆಲುವು ಕಸಿದು ತಂದ ಕಪಿಲ್ ದೇವ್ ಅವರ ಅಜೇಯ 175 ರನ್‌ಗಳ ಆ ಸಾಹಸಿಕ ಇನಿಂಗ್ಸ್‌ಗೆ ಗುರುವಾರ 37 ವರ್ಷ ಪೂರ್ಣಗೊಂಡಿದೆ. ಕಪಿಲ್ ಅಂಥದ್ದೊಂದು ಇನಿಂಗ್ಸ್ ಆಡದಿದ್ದರೆ ಭಾರತೀಯ ಕ್ರಿಕೆಟ್ ಖಂಡಿತವಾಗಿಯೂ ಈಗಿನ ವರ್ಣರಂಜಿತ ಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಹಾಗಾದರೆ ಆ ಇನಿಂಗ್ಸ್ ಹೇಗೆ ಮೂಡಿಬಂತು ಎಂಬುದರ ವಿವರ ಇಲ್ಲಿದೆ ಓದಿ…

    ಇದನ್ನೂ ಓದಿ:  ಕ್ರಿಕೆಟ್‌ಗೆ ಎಸ್.ಶ್ರೀಶಾಂತ್ ವಾಪಸ್..!

    1983ರ ಜೂನ್ 18ರಂದು ಟುನ್‌ಬ್ರಿಡ್ಜ್ ವೆಲ್ಸ್‌ನ ನೆವಿಲ್ ಗ್ರೌಂಡ್‌ನಲ್ಲಿ ನಡೆದ ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಭಾರತ ನಾಕೌಟ್ ಆಸೆ ಜೀವಂತ ಉಳಿಸಿಕೊಳ್ಳಲು ಗೆಲ್ಲಲೇಬೇಕಾಗಿತ್ತು. ದುರ್ಬಲ ಜಿಂಬಾಬ್ವೆ ತಂಡವೂ ಎದುರಾಳಿಯಾಗಿತ್ತು. ಆದರೆ, ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡ ನಾಯಕ ಕಪಿಲ್ ದೇವ್, ಡ್ರೆಸ್ಸಿಂಗ್ ರೂಂಗೆ ತೆರಳಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಭಾರತ ತಂಡ 17 ರನ್ ಗಳಿಸುವಷ್ಟರಲ್ಲೇ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರಂಭಿಕರಾದ ಸುನೀಲ್ ಗಾವಸ್ಕರ್ ಮತ್ತು ಕೆ. ಶ್ರೀಕಾಂತ್ ಸೊನ್ನೆ ಸುತ್ತಿದ್ದರೆ, ವನ್‌ಡೌನ್ ಬ್ಯಾಟ್ಸ್‌ಮನ್ ಮೊಹಿಂದರ್ ಅಮರ್‌ನಾಥ್ 5, ಸಂದೀಪ್ ಪಾಟೀಲ್ 1 ಮತ್ತು ಯಶ್ಪಾಲ್ ಶರ್ಮ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕಪಿಲ್ ದೇವ್‌ಗೆ ಬಾಲಂಗೋಚಿಗಳಷ್ಟೇ ಸಾಥ್ ನೀಡಬೇಕಾಗಿತ್ತು.

    ಇದನ್ನೂ ಓದಿ: ಬಿಸಿಸಿಐಗೆ ಐಸಿಸಿ ಚೇರ್ಮನ್ ಶಶಾಂಕ್ ಕಿರಿಕ್!

    ಭಾರತೀಯ ಕ್ರಿಕೆಟ್ ಚಿತ್ರಣವನ್ನೇ ಬದಲಾಯಿಸಿದ ಕಪಿಲ್ ದೇವ್ ಇನಿಂಗ್ಸ್‌ಗೆ 37 ವರ್ಷ

    ದಿಟ್ಟ ಸಾಹಸ ಮೆರೆದು 138 ಎಸೆತಗಳ ಸಾಹಸಿಕ ಇನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 175 ರನ್ ಸಿಡಿಸಿದ ಕಪಿಲ್ ದೇವ್‌ಗೆ ಕನ್ನಡಿಗರಾದ ರೋಜರ್ ಬಿನ್ನಿ (22) ಮತ್ತು ಸಯ್ಯದ್ ಕಿರ್ಮಾನಿ (ಅಜೇಯ 24) ಸಮರ್ಥ ಸಾಥ್ ನೀಡಿದ್ದರು. ಬಿನ್ನಿ ಜತೆಗೆ 60, ಮದನ್ ಲಾಲ್ ಜತೆಗೆ (17) ಮತ್ತು ಕಿರ್ಮಾನಿ ಜತೆಗೆ ಮುರಿಯದ 9ನೇ ವಿಕೆಟ್‌ಗೆ 126 ರನ್ ಕೂಡಿಹಾಕಿದ ಕಪಿಲ್ ದೇವ್, ಭಾರತ ತಂಡಕ್ಕೆ 60 ಓವರ್‌ಗಳಲ್ಲಿ 8 ವಿಕೆಟ್‌ಗೆ 266 ರನ್ ಪೇರಿಸಲು ನೆರವಾಗಿದ್ದರು. ಪ್ರತಿಯಾಗಿ ಮದನ್ ಲಾಲ್ (42ಕ್ಕೆ 3) ಮತ್ತು ರೋಜರ್ ಬಿನ್ನಿ (45ಕ್ಕೆ 2) ದಾಳಿಗೆ ಕುಸಿದ ಜಿಂಬಾಬ್ವೆ 57 ಓವರ್‌ಗಳಲ್ಲಿ 235 ರನ್‌ಗೆ ಆಲೌಟ್ ಆಗಿತ್ತು. 31 ರನ್‌ಗಳ ರೋಚಕ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್ ಆಸೆ ಜೀವಂತ ಉಳಿಸಿಕೊಂಡಿತ್ತು. 7 ದಿನಗಳ ಬಳಿಕ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಲಾರ್ಡ್ಸ್ ಅಂಗಳದಲ್ಲಿ ಐತಿಹಾಸಿಕ ವಿಶ್ವಕಪ್ ಗೆಲುವಿನ ಸಾಧನೆ ಮಾಡಿತ್ತು.

    ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ಆಡಲಿವೆ 3 ತಂಡಗಳು! ದಕ್ಷಿಣ ಆಫ್ರಿಕಾದಲ್ಲಿ ಶುರುವಾಗಲಿದೆ 3ಟಿ ಕ್ರಿಕೆಟ್!

    ಕಪಿಲ್ ದೇವ್ ಅವರ ಇನಿಂಗ್ಸ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುನ್ನತ ಸ್ಥಾನ ಪಡೆದಿದೆ. ಕಪಿಲ್ ಈ ಇನಿಂಗ್ಸ್ ಮೂಲಕ ಹಲವಾರು ದಾಖಲೆಗಳನ್ನೂ ಬರೆದಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಸಿಡಿಸಿದ ಮೊದಲ ಶತಕವೂ ಆಗಿದೆ. 4ನೇ ಕ್ರಮಾಂಕಕ್ಕಿಂತ ಕೆಳಗೆ ಬ್ಯಾಟಿಂಗ್‌ಗೆ ಇಳಿದ ಬ್ಯಾಟ್ಸ್‌ಮನ್ ಒಬ್ಬ ಗಳಿಸಿದ ಅತ್ಯಧಿಕ ರನ್ ಆಗಿ ಈಗಲೂ ಇದು ಏಕದಿನ ಕ್ರಿಕೆಟ್ ವಿಶ್ವದಾಖಲೆಯಾಗಿದೆ. ಮುಂದಿನ 11 ತಿಂಗಳು, 13 ದಿನಗಳ ಕಾಲ ಇದು ಏಕದಿನ ಕ್ರಿಕೆಟ್ ಇತಿಹಾಸದ ಸರ್ವಾಧಿಕ ರನ್ ಮತ್ತು 4 ವರ್ಷ 25 ದಿನಗಳ ಕಾಲ ವಿಶ್ವಕಪ್ ಇತಿಹಾಸದ ಸರ್ವಾಧಿಕ ರನ್ ಗಳಿಕೆಯೂ ಆಗಿತ್ತು. ವಿಪರ‌್ಯಾಸವೆಂದರೆ ಆ ದಿನ ಪ್ರಸಾರ ವಾಹಿನಿ ಬಿಬಿಸಿ ಸಂಸ್ಥೆಯ ನೌಕರರು ಮುಷ್ಕರ ಹೂಡಿದ್ದರಿಂದಾಗಿ ಈ ಪಂದ್ಯ ನೇರಪ್ರಸಾರ ಕಂಡಿರಲಿಲ್ಲ. ಹೀಗಾಗಿ ಕಪಿಲ್ ಅವರ ಈ ಇನಿಂಗ್ಸ್‌ನ ವಿಡಿಯೋ ಚಿತ್ರಣ ಯಾರಿಗೂ ಲಭ್ಯವಿಲ್ಲ. ಕಪಿಲ್ ಅವರ ಬ್ಯಾಟಿಂಗ್ ಕೆಲ ಚಿತ್ರಗಳು ಓಡಾಡುತ್ತಿದ್ದರೂ, ಅದು ಅದೇ ಇನಿಂಗ್ಸ್‌ನ ಚಿತ್ರಗಳೇ ಎಂಬ ಖಚಿತತೆ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts